ದಲಿತರ ಕುಂದುಕೊರತೆ ಸಭೆ ಕರೆಯುವಂತೆ ಸಚಿವ ಕೋಟಗೆ ಮನವಿ

Update: 2022-12-07 14:12 GMT

ಕುಂದಾಪುರ, ಡಿ.7: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಲಿತರ ಕುಂದು ಕೊರತೆ ಸಭೆಯನ್ನು ಕೂಡಲೇ ಕರೆಯುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿತು.

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದಲೂ ಉಡುಪಿ ಜಿಲ್ಲೆಯಲ್ಲಿ ಸರಕಾರದ ನಿಯಾಮವಳಿ ಪ್ರಕಾರ ಪ್ರತಿ ತಿಂಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ದಲಿತರ ಕುಂದು ಕೊರತೆ ಸಭೆಯನ್ನು ಕರೆದಿಲ್ಲ. ಈ ಬಗ್ಗೆ ಸಚಿವರಿಗೆ ಮೌಖಿಕವಾಗಿ ಬಹಳಷ್ಟು ಸಾರಿ ಮನವಿ ಮಾಡಿದರೂ ಸಭೆ ಕರೆಯುವಂತೆ ಎಲ್ಲೂ ನಿರ್ದೇಶನ ಕೊಟ್ಟಂತಿಲ್ಲ. ಇನ್ನು ಜಿಲ್ಲಾಧಿಕಾರಿ ಒಂದು ಬಾರಿ ಸಭೆ ಕರೆದಿದ್ದರೆ ಬಿಟ್ಟರೆ ಮತ್ತೆ ಸಭೆ ಕರೆದಿಲ್ಲ ಎಂದು ಸಮಿತಿಯ ಸಂಘಟನಾ ಸಂಚಾಲಕ ಕೆ.ಎಸ್.ವಿಜಯ್ ಕುಂದಾಪುರ ಮನವಿಯಲ್ಲಿ ದೂರಿದ್ದಾರೆ.

ದಲಿತರ ಕುಂದು ಕೊರತೆಗಳನ್ನು ಪಟ್ಟಿ ಮಾಡಿ ಸಭೆ ಕರೆಯಲು ನಿರ್ದೇಶನ ಕೊಡಬೇಕಾದ ಸಮಾಜ ಕಲ್ಯಾಣ ಇಲಾಖೆಯು ಕೈ ಕಟ್ಟಿ ಕುಳಿತಿರುವುದು ಬಹಳಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸರಕಾರದ ನಿಯಮಾವಳಿ ಯಂತೆ ಮುಂದೆ ಸಭೆ ಕರೆಯದೆ ಹೋದರೆ ಸಂಬಂಧಪಟ್ಟ ಇಲಾಖೆಯ ವಿರುದ್ಧ ಪ್ರತಿ ಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಶಂಕರನಾರಾಯಣ ಗ್ರಾಪಂ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಗಳಿಗೆಂದೇ ಮಂಜೂರಾಗಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಇಲ್ಲದ ಪ್ರದೇಶದಲ್ಲಿ ಕಾಮಗಾರಿ ಮಾಡಿ ಅನುದಾನ ದುರ್ಬಳಕೆ ಮಾಡಿಕೊಂಡ ಬಗ್ಗೆ ಇಲಾಖೆಗೆ ದೂರು ನೀಡಲಾಗಿತ್ತು. ಈ ದೂರಿಗೆ ಯಾವ ರೀತಿಯಾದ ತನಿಖೆ ಮಾಡಿ ಕ್ರಮ ವಹಿಸಲಾಗಿದೆ ಎಂಬ ವರದಿಯನ್ನು ನೀಡಬೇಕು ಎಂದು ಮನವಿಯಲ್ಲಿ ಅವರು ಒತ್ತಾಯಿಸಿದ್ದಾರೆ.

Similar News