ಉತ್ತರಪ್ರದೇಶ: ದಂಪತಿ ಗೆ ಜೊಲ್ಲು ನೆಕ್ಕುವಂತೆ ಬಲವಂತ; ಗ್ರಾಮ ಮುಖ್ಯಸ್ಥನ ಬಂಧನ

Update: 2022-12-07 15:13 GMT

ಲಕ್ನೋ, ಡಿ. 7: ಜೊಲ್ಲು ನೆಕ್ಕುವಂತೆ ದಂಪತಿಯನ್ನು ಬಲವಂತಪಡಿಸಿದ ಹಾಗೂ ವಿವಾಹಿತ ಮಹಿಳೆಗೆ ಹೊಡೆದ ಆರೋಪದಲ್ಲಿ ಉತ್ತರಪ್ರದೇಶದ ಘಾಝಿಪುರ (Ghazipur)ಜಿಲ್ಲೆಯ ಬಹಾರಿಯಬಾದ್ (Bahariyabad)ಗ್ರಾಮದ ಮುಖ್ಯಸ್ಥನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮಹಿಳೆಯು ಹೆತ್ತವರ ಇಚ್ಛೆಗೆ ವಿರುದ್ಧವಾಗಿ ತನ್ನ ಪ್ರಿಯಕರನನ್ನು ಮದುವೆಯಾಗಿರುವುದಕ್ಕಾಗಿ ದಂಪತಿಗೆ ಈ ಶಿಕ್ಷೆ ಕೊಡಲಾಗಿತ್ತು ಎಂದು ‘ಕ್ರೈಮ್ ತಕ್’(Bahariyabad) ವರದಿ ಮಾಡಿದೆ. ಮದುವೆಯಾದ ಬಳಿಕ ದಂಪತಿ ತಲೆಮರೆಸಿಕೊಂಡಿದ್ದರು. ಆದರೆ, ಗ್ರಾಮದ ಮುಖ್ಯಸ್ಥನು ಅವರನ್ನು ಪತ್ತೆಮಾಡಿದ್ದನು.

ಗ್ರಾಮ ಮುಖ್ಯಸ್ಥ ಬ್ರಜೇಶ್ ಯಾದವ್ (Brajesh Yadav)ಮಹಿಳೆಯನ್ನು ನಿಂದಿಸುವುದನ್ನು ಮತ್ತು ಬೆತ್ತದಿಂದ ಹೊಡೆಯುವುದಾಗಿ ಬೆದರಿಸುವುದನ್ನು ವೀಡಿಯೊ ತೋರಿಸುತ್ತದೆ. ನೆಲದಲ್ಲಿರುವ ಜೊಲ್ಲನ್ನು ನೆಕ್ಕುವಂತೆ ಬ್ರಜೇಶ್ ಯಾದವ್ ಮಹಿಳೆಗೆ ಪದೇ ಪದೇ ಹೇಳುವುದು ವೀಡಿಯೊದಲ್ಲಿ ಕಾಣುತ್ತದೆ. ಅದನ್ನು ಮಹಿಳೆ ನಿರಾಕರಿಸುತ್ತಾರೆ. ಬಳಿಕ, ಮಹಿಳೆ ಜೊಲ್ಲು ನೆಕ್ಕುವುದನ್ನು ಬಲವಂತಪಡಿಸಲು ಆಕೆಗೆ ಗ್ರಾಮ ಮುಖ್ಯಸ್ಥನು ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮಹಿಳೆ ತನ್ನ ಮುಖವನ್ನು ಮುಚ್ಚಲು ಯತ್ನಿಸುವಾಗ ಯಾದವ್ ಆಕೆಯ ದುಪಟ್ಟವನ್ನು ತೆಗೆಯುತ್ತಾನೆ. ಮಹಿಳೆ ಜೊಲ್ಲನ್ನು ನೆಕ್ಕಿದ ಬಳಿಕ, ಆಕೆಯ ಗಂಡನೂ ಜೊಲ್ಲು ನೆಕ್ಕುವಂತೆ ಗ್ರಾಮ ಪ್ರಧಾನ ಮಾಡಿದ್ದಾನೆಂದುವರದಿಯಾಗಿದೆ.

ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 323 (ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು), 354 (ಗೌರವಕ್ಕೆ ಚ್ಯುತಿ ಮಾಡುವ ಉದ್ದೇಶದಿಂದ ಮಹಿಳೆಗೆ ಹೊಡೆಯುವುದು), 504 (ಶಾಂತಿಭಂಗಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನ ಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯ ಗೌರವಕ್ಕೆ ಧಕ್ಕೆ ಮಾಡುವ ಉದ್ದೇಶದ ಮಾತುಗಳನ್ನು ಆಡುವುದು, ಸಂಜ್ಞೆ ಮಾಡುವುದು ಅಥವಾ ವರ್ತಿಸುವುದು) ವಿಧಿಗಳನ್ವಯ ಯಾದವ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Similar News