ಜಲ್ಲಿಕಟ್ಟು ವಿರುದ್ಧದ ಅರ್ಜಿಗಳ ಕುರಿತು ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Update: 2022-12-08 15:22 GMT

ಹೊಸದಿಲ್ಲಿ,ಡಿ.8: ಗೂಳಿ ಪಳಗಿಸುವ ಕ್ರೀಡೆ ‘ಜಲ್ಲಿಕಟ್ಟು ’(Jallikattu)ಮತ್ತು ಎತ್ತಿನ ಬಂಡಿ ಓಟದ ಸ್ಪರ್ಧೆಗೆ ಅನುಮತಿ ನೀಡಿರುವ ತಮಿಳುನಾಡು ಮತ್ತು ಮಹಾರಾಷ್ಟ್ರ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ತನ್ನ ತೀರ್ಪನ್ನು ಗುರುವಾರ ಸರ್ವೋಚ್ಚ ನ್ಯಾಯಾಲಯವು ಕಾಯ್ದಿರಿಸಿದೆ.

ಜಲ್ಲಿಕಟ್ಟು ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಪೊಂಗಲ್ ಉತ್ಸವದ ಸಂದರ್ಭ ನಡೆಯುವ ಜನಪ್ರಿಯ ಕ್ರೀಡೆಯಾಗಿದೆ.

ನ್ಯಾ.ಕೆ.ಎಂ.ಜೋಸೆಫ್ (K. M. Joseph)ನೇತೃತ್ವದ ಐವರು ನ್ಯಾಯಾಧೀಶರ ಪೀಠವು ತಮಿಳುನಾಡು ಪರ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಮತ್ತು ಇತರ ಕಕ್ಷಿದಾರರನ್ನು ಪ್ರತಿನಿಧಿಸಿದ್ದ ಹಲವಾರು ವಕೀಲರ ವಾದಗಳನ್ನು ಆಲಿಸಿತು.

ನ್ಯಾಯಮೂರ್ತಿಗಳಾದ ಅಜಯ ರಸ್ತೋಗಿ,ಅನಿರುದ್ಧ ಬೋಸ್, ಹೃಷಿಕೇಶ ರಾಯ್ ಮತ್ತು ಸಿ.ಟಿ.ರವಿಕುಮಾರ ಅವರನ್ನೂ ಒಳಗೊಂಡಿದ್ದ ಪೀಠವು ಒಂದು ವಾರದೊಳಗೆ ಸಾಮೂಹಿಕವಾಗಿ ಲಿಖಿತ ನಿವೇದನೆಗಳನ್ನು ಸಲ್ಲಿಸುವಂತೆ ಕಕ್ಷಿದಾರರಿಗೆ ಸೂಚಿತು.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ತಮಿಳುನಾಡು ತಿದ್ದುಪಡಿ) ಕಾಯ್ದೆ,2017 ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಗಣನೀಯ ಪ್ರಶ್ನೆಗಳನ್ನು ಒಳಗೊಂಡಿರುವುದರಿಂದ ವಿಸ್ತ್ರತ ಪೀಠದಿಂದ ತೀರ್ಮಾನಿಸಲ್ಪಡುವ ಅಗತ್ಯವಿದೆ ಎಂದು ಈ ಹಿಂದೆ ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು,ವಿಸ್ತ್ರತ ಪೀಠವು ನಿರ್ಧರಿಸಬೇಕಾದ ಐದು ಪ್ರಶ್ನೆಗಳನ್ನು ರೂಪಿಸಿತ್ತು.

ಪ್ರಾಣಿ ಹಕ್ಕುಗಳ ಸಂಸ್ಥೆ ಪೆಟಾ ಸಲ್ಲಿಸಿದ ಅರ್ಜಿ ಸೇರಿದಂತೆ ವಿವಿಧ ಅರ್ಜಿಗಳು ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಿರುವ ರಾಜ್ಯದ ಕಾನೂನನ್ನು ಪ್ರಶ್ನಿಸಿವೆ.

Similar News