ಕೇರಳದ ಸಿಪಿಎಂ ಶಾಸಕ ಸಾಜಿ ಚೆರಿಯನ್ ಅನರ್ಹತೆ ಕೋರಿದ್ದ ಅರ್ಜಿಗೆ ಹೈಕೋರ್ಟ್ ತಿರಸ್ಕಾರ

Update: 2022-12-08 15:26 GMT

ತಿರುವನಂತಪುರ,ಡಿ.8: ಕೇರಳದ ಸಿಪಿಎಂ ಶಾಸಕ ಹಾಗೂ ಮಾಜಿ ಸಚಿವ ಸಾಜಿ ಚೆರಿಯನ್ (Saji Cherian)ಅವರು ಸಂವಿಧಾನವನ್ನು ಅವಮಾನಿಸಿ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಕೋರಿ ಮಾಜಿ ಸಚಿವ ಬಿಜು ವಿ.ಚೆರುಮಾನ್ (Biju v. Cheruman)ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಉಚ್ಚ ನ್ಯಾಯಾಲಯವು ಗುರುವಾರ ತಿರಸ್ಕರಿಸಿದೆ.

ಚೆರುಮಾನ್,ಚುನಾವಣಾ ಆಯೋಗ ಮತ್ತು ಇತರರ ವಾದಗಳನ್ನು ಆಲಿಸಿದ ಬಳಿಕ ಮುಖ್ಯ ನ್ಯಾಯಾಧೀಶ ಎಂ.ಮಣಿಕುಮಾರ (M. Manikumar)ಮತ್ತು ನ್ಯಾ.ಶಾಜಿ ಎಂ.ಚಾಲಿ ಅವರ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ಸಮಾರಂಭವೊಂದರಲ್ಲಿ ಸಂವಿಧಾನವನ್ನು ಬಹಿರಂಗವಾಗಿ ಅವಮಾನಿಸುವ ಮೂಲಕ ಚೆರಿಯನ್ ಸಂವಿಧಾನದ 173(ಎ) ಮತ್ತು 188ನೇ ವಿಧಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದರು. ಇವು ಶಾಸಕರೋರ್ವರ ಅರ್ಹತೆ ಮತ್ತು ಅವರು ಸ್ವೀಕರಿಸುವ ಪ್ರಮಾಣ ವಚನದ ಕುರಿತು ಹೇಳಿವೆ.

 ವಿಧಿ 191 ಮತ್ತು 192ರ ಅನ್ವಯ ವಿಧಾನಸಭೆಯ ಸದಸ್ಯರೋರ್ವರನ್ನು ಅನರ್ಹಗೊಳಿಸಲು ಕೆಲವು ಮಾನದಂಡಗಳು ಮತ್ತು ವಿಧಿವಿಧಾನಗಳಿವೆ ಎಂದು ಅಡ್ವೊಕೇಟ್ ಜನರಲ್ ಕೆ.ಗೋಪಾಲಕೃಷ್ಣ ಕುರುಪ್(K. Gopalakrishna Kurup) ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಪಿಣರಾಯಿ ವಿಜಯನ್ ಸಂಪುಟದ ಮಾಜಿ ಸಚಿವ ಚೆರಿಯನ್ ಕಳೆದ ಜುಲೈನಲ್ಲಿ ಪಟ್ಟಣಂತಿಟ್ಟದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾಡಿದ್ದ ಭಾಷಣದಿಂದಾಗಿ ವಿವಾದಕ್ಕೆ ಸಿಲುಕಿದ್ದರು. ತನ್ನ ಭಾಷಣದಲ್ಲಿ ಅವರು ಸಂವಿಧಾನದ ವಿರುದ್ಧ ಹಲವಾರು ಟೀಕೆಗಳನ್ನು ಮಾಡಿದ್ದು,ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಭಾಷಣದ ಐದು ದಿನಗಳ ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

Similar News