ಕೃತಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಲೇಖಕಿ ಡಾ.ಫರ್ಹಾತ್ ಖಾನ್ ಬಂಧನ

Update: 2022-12-08 16:21 GMT

ಭೋಪಾಲ: ತನ್ನ ಕೃತಿಯಲ್ಲಿ ದ್ವೇಷವನ್ನು ಉತ್ತೇಜಿಸಿದ ಮತ್ತು ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪದಲ್ಲಿ ಲೇಖಕಿ ಡಾ.ಫರ್ಹಾತ್ ಖಾನ್ ಅವರನ್ನು ಬಂಧಿಸಲಾಗಿದೆ ಎಂದು ಮಧ್ಯಪ್ರದೇಶದ ಗೃಹಸಚಿವ ನರೋತ್ತಮ ಮಿಶ್ರಾ ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇಂದೋರ್ ಮೂಲದ ಖಾನ್ ಬರೆದಿರುವ ‘ಕಲೆಕ್ಟಿವ್ ವಯೊಲೆನ್ಸ್ ಆ್ಯಂಡ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್’ ಪಠ್ಯಪುಸ್ತಕವನ್ನು ಅಮರ್ ಲಾ ಪಬ್ಲಿಕೇಷನ್ಸ್ ಪ್ರಕಟಿಸಿದೆ.
ಇಂದೋರಿನ ಗವರ್ನ್‌ಮೆಂಟ್ ನ್ಯೂ ಲಾ ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆಯ ಬಳಿಕ ಡಿ.3ರಂದು ಖಾನ್ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಖಾನ್ ಪುಸ್ತಕವು ಹಿಂದುಗಳು ಮತ್ತು ಆರೆಸ್ಸೆಸ್, ವಿಹಿಂಪ ಮತ್ತು ಬಜರಂಗ ದಳದಂತಹ ಹಿಂದುತ್ವ ಸಂಘಟನೆಗಳ ವಿರುದ್ಧ ಆಕ್ಷೇಪಾರ್ಹ ವಿಷಯವನ್ನೊಳಗೊಂಡಿದೆ ಮತ್ತು 2017ರಿಂದಲೂ ಈ ಪಠ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.

ಖಾನ್ ಜೊತೆಗೆ ಅಮರ್ ಲಾ ಪಬ್ಲಿಕೇಷನ್ಸ್, ಕಾಲೇಜಿನ ಪ್ರಾಂಶುಪಾಲ ಇನಾಮುರ್ ರಹಮಾನ್ ಮತ್ತು ಪ್ರಾಧ್ಯಾಪಕ ಮಿರ್ಝಾ ಮೋಜಿಝ್ ಬೇಗ್ ಅವರ ವಿರುದ್ಧವೂ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

ಲೇಖಕಿ ಫರ್ಹಾತ್ ಖಾನ್ ಪುಣೆಯ ಆಸ್ಪತ್ರೆಯೊಂದರಲ್ಲಿ ಡಯಾಲಿಸಿಸ್‌ಗೆ ಒಳಗಾಗಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಮಿಶ್ರಾ ತಿಳಿಸಿದರು.

ಖಾನ್ ಪತ್ತೆಗಾಗಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವಾರು ಸ್ಥಳಗಳಿಗೆ ಪೊಲೀಸ್ ತಂಡಗಳನ್ನು ಕಳುಹಿಸಲಾಗಿತ್ತು. ಸುಳಿವುಗಳ ಆಧಾರದಲ್ಲಿ ಪುಣೆಯನ್ನು ಅವರನ್ನು ಪತ್ತೆ ಹಚ್ಚಲಾಗಿದ್ದು,ತನಿಖೆಗೆ ಸಹಕರಿಸುವಂತೆ ಮತ್ತು ದೋಷಾರೋಪ ಪಟ್ಟಿ ಸಲ್ಲಿಕೆ ಸಂದರ್ಭ ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚಿಸಿ ಅವರಿಗೆ ನೋಟಿಸ್ ನೀಡಲಾಗಿದೆ. ಖಾನ್ ಗಂಭೀರ ಮೂತ್ರಪಿಂಡ ರೋಗದಿಂದ ಬಳಲುತ್ತಿದ್ದು,ನಿಯಮಿತ ಡಯಾಲಿಸಿಸ್ ಅಗತ್ಯವಾಗಿದೆ ಎಂದು ಡಿಸಿಪಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದರು.

‘ಪುಸ್ತಕದ ಮೊದಲ ಆವೃತ್ತಿ 2015ರಲ್ಲಿ ಪ್ರಕಟಗೊಂಡಿತ್ತು. 2021ರಲ್ಲಿ ಅದರಲ್ಲಿಯ ಆಕ್ಷೇಪಾರ್ಹ ಭಾಗಗಳ ಬಗ್ಗೆ ನಮಗೆ ತಿಳಿದು ಬಂದಿತ್ತು ಮತ್ತು ಖಾನ್ ಅವರ ಜೊತೆಗೆ ಚರ್ಚಿಸಿ ಪುಸ್ತಕದಲ್ಲಿಯ ಸಂಬಂಧಿತ ಪುಟಗಳನ್ನು ಬದಲಿಸಲಾಗಿತ್ತು’ ಎಂದು ಅಮರ್ ಲಾ ಪಬ್ಲಿಕೇಷನ್ಸ್‌ನ ಪ್ರತಿನಿಧಿ ಹಿತೇಶ ಖೇತ್ರಪಾಲ್ ಈ ಹಿಂದೆ ತಿಳಿಸಿದ್ದರು.
 

Similar News