ಎನ್‌ ಎಸ್‌ ಇ ಫೋನ್ ಕದ್ದಾಲಿಕೆ ಹಗರಣ ಪ್ರಕರಣ : ಮಾಜಿ ಮುಂಬೈ ಪೊಲೀಸ್ ಕಮಿಶನರ್‌ಗೆ ಜಾಮೀನು

Update: 2022-12-08 15:50 GMT

ಹೊಸದಿಲ್ಲಿ, ಡಿ. 8: ರಾಷ್ಟ್ರೀಯ ಶೇರು ವಿನಿಮಯ (NSE) ಕೇಂದ್ರದ ಉದ್ಯೋಗಿಗಳ ಫೋನ್ ಕದ್ದಾಲಿಕೆ ಮತ್ತು ಬೇಹುಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಂಬೈಯ ಮಾಜಿ ಪೊಲೀಸ್ ಕಮಿಶನರ್ ಸಂಜಯ್ ಪಾಂಡೆ(Sanjay Pandey)ಗೆ ದಿಲ್ಲಿ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.

ಅನುಷ್ಠಾನ ನಿರ್ದೇಶನಾಲಯವು ಜುಲೈ 19ರಂದು ಪಾಂಡೆಯನ್ನು ಬಂಧಿಸಿತ್ತು. ಈವರೆಗೆ ಅವರು ನ್ಯಾಯಾಂಗ ಕಸ್ಟಡಿಯಲ್ಲಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನುಷ್ಠಾನ ನಿರ್ದೇಶನಾಲಯವು ಮುಂಬೈನ ಮಾಜಿ ಪೊಲೀಸ್ ಕಮಿಶನರ್‌ರನ್ನು ಜುಲೈ 14ರಂದು ಬಂಧಿಸಿತ್ತು. ಅವರ ಜೊತೆಗೆ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಮಾಜಿ ಮುಖ್ಯಸ್ಥರುಗಳಾದ ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಾಣ್‌(Ravi Narayan)ರನ್ನೂ ಅದು ಬಂಧಿಸಿತ್ತು.

ಶೇರು ವಿನಿಮಯ ಕೇಂದ್ರದಲ್ಲಿ ಕೋ-ಲೊಕೇಶನ್ ಹಗರಣ ನಡೆಯುತ್ತಿದ್ದಾಗ ಅದರ ಉದ್ಯೋಗಿಗಳ ಫೋನ್‌ಗಳನ್ನು ಕದ್ದಾಲಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪಾಂಡೆ ಸ್ಥಾಪಿಸಿದ ‘ಐಸೆಕ್ ಸೆಕ್ಯುರಿಟೀಸ್’(Isaac Securities) ಎಂಬ ಕಂಪೆನಿಯನ್ನು ಎನ್‌ಎಸ್‌ಇ ಉದ್ಯೋಗಿಗಳ ಮೇಲೆ ಇಲೆಕ್ಟ್ರಾನಿಕ್ ಬೇಹುಗಾರಿಕೆ ನಡೆಸಲು ಬಳಸಲಾಗಿತ್ತು ಎಂಬುದಾಗಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಆರೋಪಿಸಿದೆ.

ಮಾರುಕಟ್ಟೆ ಆರಂಭಗೊಳ್ಳುವ ಮೊದಲೇ ಕೆಲವು ದಲ್ಲಾಳಿಗಳಿಗೆ ಎನ್‌ಎಸ್‌ಇಯ ಮಾರುಕಟ್ಟೆ ವೇದಿಕೆಯನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತಿತ್ತು. ಇದರಿಂದಾಗಿ ಆ ದಲ್ಲಾಳಿಗಳು ಅನುಚಿತ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ಇದನ್ನು ಕೋಲೊಕೇಶನ್ ಹಗರಣವೆಂದು ಕರೆಯಲಾಗಿದೆ.

Similar News