ಎನ್‌ಜೆಎಸಿ ರದ್ದತಿಯನ್ನು ಮತ್ತೊಮ್ಮೆ ಟೀಕಿಸಿದ ಉಪರಾಷ್ಟ್ರಪತಿ

Update: 2022-12-08 16:13 GMT

ಹೊಸದಿಲ್ಲಿ, ಡಿ. 8: 2015ರ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ ಕಾಯ್ದೆ (NJAC)ಯನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್‌(Supreme Court)ನ ನಿರ್ಧಾರವನ್ನು ಉಪರಾಷ್ಟ್ರಪತಿ ಜಗದೀಪ್ ಧನ್ಕರ್(Jagdeep Dhankar) ಬುಧವಾರ ಮತ್ತೊಮ್ಮೆ ಟೀಕಿಸಿದ್ದಾರೆ.

‘‘ಸುಪ್ರೀಂ ಕೋರ್ಟ್‌ನ ತೀರ್ಪು ಸಾಂವಿಧಾನಿಕ ಸಾರ್ವಭೌಮತೆಯೊಂದಿಗೆ ಮಾಡಲಾದ ರಾಜಿಯಾಗಿದೆ ಹಾಗೂ ಜನಾದೇಶಕ್ಕೆ ತೋರಿಸಿದ ಅಗೌರವವಾಗಿದೆ. ರಾಜ್ಯಸಭೆ ಮತ್ತು ಲೋಕಸಭೆಗಳು ಜನಾದೇಶದ ಪಾಲಕ ಸಂಸ್ಥೆಗಳಾಗಿವೆ’’ ಎಂದು ಧನ್ಕರ್ ಹೇಳಿದರು. ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭಿಕ ದಿನವಾದ ಬುಧವಾರ ರಾಜ್ಯಸಭೆಯ ಸಭಾಪತಿಯಾಗಿ ಕಾರ್ಯನಿರ್ವಹಿಸಿದ ಮೊದಲ ದಿನದಂದು ಅವರು ಈ ಹೇಳಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶರನ್ನು ನೇಮಕಗೊಳಿಸುವ ವಿಚಾರದಲ್ಲಿ ಸರಕಾರ ಮತ್ತು ಸರ್ವೋನ್ನತ ನ್ಯಾಯಾಲಯದ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಅವರು ತನ್ನ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತದ ಮುಖ್ಯ ನ್ಯಾಯಾಧೀಶರು, ಸುಪ್ರೀಂ ಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಾಧೀಶರು, ಕಾನೂನು ಸಚಿವ ಹಾಗೂ ಮುಖ್ಯ ನ್ಯಾಯಾಧೀಶ, ಪ್ರಧಾನಿ ಮತ್ತು ಪ್ರತಿಪಕ್ಷ ನಾಯಕರು ನೇಮಿಸುವ ಇತರ ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿಯ ಮೂಲಕ ಉನ್ನತ ನ್ಯಾಯಾಂಗಕ್ಕೆ ನೇಮಕಾತಿಗಳನ್ನು ಮಾಡಬೇಕು ಎಂಬುದಾಗಿ ಎನ್‌ಜೆಎಸಿ ಕಾಯ್ದೆ ಹೇಳುತ್ತದೆ.

ಕೊಲೀಜಿಯಮ್ ವ್ಯವಸ್ಥೆಯ ಸ್ಥಾನದಲ್ಲಿ ಎನ್‌ಜೆಎಸಿ ಬರಬೇಕಾಗಿತ್ತು. ಕೊಲೀಜಿಯಮ್ ವ್ಯವಸ್ಥೆಯಲ್ಲಿ ಮುಖ್ಯ ನ್ಯಾಯಾಧೀಶರು ಸೇರಿದಂತೆ ಸುಪ್ರೀಂ ಕೋರ್ಟ್‌ನ ಐವರು ಅತಿ ಹಿರಿಯ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗಳನ್ನು ನಿರ್ಧರಿಸುತ್ತಾರೆ.

Similar News