'ಖಾಕಿ: ದಿ ಬಿಹಾರ್‌ ಚಾಪ್ಟರ್‌' ಖ್ಯಾತಿಯ ಐಪಿಎಸ್‌ ಅಧಿಕಾರಿ ಅಮಿತ್‌ ಲೋಧಾ ವಿರುದ್ಧ ಪ್ರಕರಣ ದಾಖಲು

Update: 2022-12-08 16:47 GMT

ಹೊಸದಿಲ್ಲಿ: ಖಾಕಿ ವೆಬ್‌ ಸರಣಿ ಮೂಲಕ ವ್ಯಾಪಕ ಜನಪ್ರಿಯಗೊಂಡಿರುವ ಬಿಹಾರ ಐಪಿಎಸ್‌ ಕೇಡರ್‌ ಅಧಿಕಾರಿ ಅಮಿತ್‌ ಲೋಧಾ ವಿರುದ್ಧ ಭ್ರಷ್ಟಾಚಾರ ವಿರೋಧಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಖಾಕಿ ವೆಬ್‌ ಸರಣಿಯನ್ನು ಲೋಧಾ ಅವರ ವೃತ್ತಿ ಬದುಕಿನ ಅನುಭವದ ಆಧಾರದಲ್ಲಿ ಬರೆದ ಬಿಹಾರ್‌ ಡೈರೀಸ್‌ ಪುಸ್ತಕವನ್ನು ಆಧರಿಸಿ ನಿರ್ಮಿಸಲಾಗಿದೆ.

ಮಗಧ್‌ ಪ್ರಾಂತ್ಯದಲ್ಲಿ ಇನ್ಸ್ಪೆಕ್ಟರ್‌ ಜನರಲ್‌ ಆಗಿದ್ದಾಗ ಗಳಿಸಿದ ಕಪ್ಪು ಹಣವನ್ನು ಈ ವೆಬ್‌ ಸೀರಿಸ್‌ಗಾಗಿ ಲೋಧಾ ಬಳಸಿದ್ದಾರೆ ಎಂಬ ಆರೋಪ ಅವರ ಮೇಲಿದೆ. 
ಐಪಿಸಿ ಸೆಕ್ಷನ್‌ 120 (ಬಿ) ಹಾಗೂ 168 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲೋಧ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. 

ಲೋಧಾ ಅವರು ಕತೆಗಾರರಲ್ಲ ಅಥವಾ ಪುಸ್ತಕವನ್ನು ಬರೆಯಲು ಮತ್ತು ಅದನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು ಅವರಿಗೆ ಅಧಿಕಾರವಿಲ್ಲ ಎಂದು ಎಫ್‌ಐಆರ್ ಹೇಳಿದೆ.

ಅಲ್ಲದೆ, ಈ ಸಂಗತಿಗಳನ್ನು ನಿರ್ಲಕ್ಷಿಸಿ, ಅಕ್ರಮವಾಗಿ ಸಂಪಾದಿಸಲು ಮತ್ತು ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು ಅವರು ಬರೆದ ʼಬಿಹಾರ್ ಡೈರಿʼ ಪುಸ್ತಕವನ್ನು 'ಖಾಕಿ: ದಿ ಬಿಹಾರ್ ಚಾಪ್ಟರ್' (Khakee: The Bihar Chapter) ವೆಬ್ ಸರಣಿಯ ನಿರ್ಮಾಣಕ್ಕಾಗಿ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
 
“ಮಗಧ ಪ್ರದೇಶದ ಆಗಿನ ಐಜಿ ಅಮಿತ್ ಲೋಧಾ ವಿರುದ್ಧ ಮಾಡಲಾದ ಭ್ರಷ್ಟಾಚಾರ, ವೈಯಕ್ತಿಕ ಹಿತಾಸಕ್ತಿ ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳ ತನಿಖಾ ವರದಿಯನ್ನು ಪೊಲೀಸ್ ಪ್ರಧಾನ ಕಚೇರಿ ಮತ್ತು ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಇದಲ್ಲದೆ, ನೆಟ್‌ಫ್ಲಿಕ್ಸ್-ಫ್ರೈಡೇ ಸ್ಟೋರಿ ಟೆಲ್ಲರ್‌ನೊಂದಿಗೆ ಸರ್ಕಾರಿ ಸೇವಕನಾಗಿದ್ದಾಗಲೇ ವಾಣಿಜ್ಯ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗಿದೆ” ಎಂದು ಬಿಹಾರದ ವಿಶೇಷ ವಿಜಿಲೆನ್ಸ್ ಘಟಕವು ಹೇಳಿದೆ.

Similar News