ದೇವಸ್ಥಾನ ಉತ್ಸವಗಳಲ್ಲಿ ಮತ ವೈಷಮ್ಯ ಕೃತ್ಯ: ವಿಹಿಂಪ, ಬಜರಂಗದಳ ವಿರುದ್ಧ ಕ್ರಮಕ್ಕೆ 'ಸಹಬಾಳ್ವೆ' ಮನವಿ

Update: 2022-12-09 09:08 GMT

ಉಡುಪಿ, ಡಿ.8: ಅಸಂವಿಧಾನಿಕ ಹಾಗೂ ಮತೀಯ ದ್ವೇಷ ಬಿತ್ತುವ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಸಂಘಟನೆಗಳ ಚಟುವಟಿಕೆ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಉಡುಪಿ ಸಹಬಾಳ್ವೆ ವತಿಯಿಂದ ಗುರುವಾರ ಉಡುಪಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಹಲವು ಕಡೆ ನಡೆಯುವ ಹಿಂದು ದೇವಾಲಯಗಳ ಜಾತ್ರೆ- ಉತ್ಸವಗಳಲ್ಲಿ ಅಲ್ಪಸಂಖ್ಯಾತ ಮತದ ವ್ಯಾಪಾರಿಗಳಿಗೆ ಮಾರಾಟ ಮಳಿಗೆಗಳನ್ನು ಹಾಕಲು ಅವಕಾಶ ನಿರಾಕರಿಸಬೇಕೆಂದು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಸಂಘಟನೆಗಳು ಆಯಾ ದೇವಸ್ಥಾನಗಳ ಆಡಳಿತ ಮಂಡಳಿಗಳ ಮೇಲೆ ಒತ್ತಡ ಹೇರುವ ಕೃತ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಕೋಟೇಶ್ವರದಲ್ಲಿ ಡಿ.8ರಂದು ನಡೆದ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಡಿ.9ರಂದು ಉಪ್ಪುಂದದಲ್ಲಿ ನಡೆಯುವ ಉತ್ಸವಗಳಲ್ಲಿ ಅಲ್ಪಸಂಖ್ಯಾತ ಮತದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಒತ್ತಡ ಹೇರುವ ಬಗ್ಗೆ ಲಿಖಿತ ಮನವಿಯನ್ನು ದೇವಸ್ಥಾನದ ಆಡಳಿತ ಮಂಡಳಿಗಳಿಗೆ ಈ ಸಂಘಟನೆಗಳು ನೀಡಿವೆ. ಆ ಒತ್ತಡ ಪತ್ರದಲ್ಲಿ ಅಲ್ಪಸಂಖ್ಯಾತ ಸಮು ದಾಯಗಳ ಮೇಲೆ ಅವಾಸ್ತವಿಕವಾದ ಹಸಿಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಕಳೆದ ತಿಂಗಳುಗಳಲ್ಲಿ ಉಡುಪಿ ತಾಲೂಕಿನ ಉದ್ಯಾವರ ಹಾಗೂ ಕಾಪು ದೇವಾಸ್ಥಾನ ಉತ್ಸವಗಳ ವೇಳೆಯೂ ಇದೇ ಬಗೆಯ ಒತ್ತಡವನ್ನು ಈ ಸಂಘಟನೆಗಳು ಆಯಾ ದೇವಸ್ಥಾನಗಳ ಆಡಳಿತ ಮಂಡಳಿಗಳ ಮೇಲೆ ಹೇರಿದ್ದವು. ಈ ಕೃತ್ಯಗಳು ದೇಶದ ಸಂವಿಧಾನಿಕ ಕಾನೂನುಗಳು ಜಾತಿ ಮತಾತೀತವಾಗಿ ಮಾಡಿರುವ ಸಾರ್ವಜನಿಕ ನಾಗಾರಿಕ ಹಕ್ಕುಗಳ ಮೇಲೆ ಪ್ರಜ್ಞಾ ಪೂರ್ವಕವಾಗಿ ನಡೆಸುತ್ತಿರುವ ಆಕ್ರಮಣವಾಗಿವೆ. ಮತ ನಂಬಿಕೆಯ ಆಧಾರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಬಹುಸಂಖ್ಯಾತ ಮತದ ಜನರಲ್ಲಿ ಅಪನಂಬಿಕೆ ಹಾಗೂ ದ್ವೇಷ ಮನೋಭಾವವನ್ನು ಬಿತ್ತಿ ಸಾರ್ವಜನಿಕ ಶಾಂತಿಯನ್ನು ಕದಡುವ ಕಾನೂನುಬಾಹಿರ ಅಪರಾಧಗಳಾಗಿವೆ. ಆದುದರಿಂದ ಜಿಲ್ಲಾ ದಂಡಾಧಿಕಾರಿಯಾಗಿರುವ ತಾವು ಈ ಬಗೆಯ ಕಾನೂನುಬಾಹಿರ ಚಟುವಟಿಕೆಗಳನ್ನು ಗಮನಕ್ಕೆ ತಂದುಕೊಂಡು, ಸಂವಿಧಾನ ನ್ಯಾಯಾನುಸಾರ ಕಾನೂನು ಕ್ರಮ ಜರುಗಿಸದೆ ಹೋದಲ್ಲಿ ಈ ಸಂಘಟನೆಗಳು ಮತೀಯ ದ್ವೇಷವನ್ನು ಎಗ್ಗಿಲ್ಲದೆ ಹಬ್ಬಿಸಿ, ಹಿಂಸಾತ್ಮಕ ವಾತಾವರಣ ಸೃಷ್ಟಿಸುವುದ ರಲ್ಲಿ ಸಂದೇಹವಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ. ಪರಿಸ್ಥಿತಿಯ ಸೂಕ್ಷ್ಮವನ್ನು ತಾವು ತುರ್ತಾಗಿ ಕಂಡುಕೊಂಡು, ಈ ಅಸಂವಿಧಾನಿಕ ಚಟುವಟಿಕೆಗಳ ಮೇಲೆ ಸೂಕ್ತ ಕ್ರಮ ಜರುಗಿಸಿ, ಜಿಲ್ಲೆಯ ಶಾಂತಿ-ಸೌಹಾರ್ದ ಬದುಕು ನಡೆಯುವ ತಿಳಿ ವಾತಾವರಣ ಸೃಷ್ಟಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿಯನ್ನು ಅಪರ ಜಿಲ್ಲಾಧಿಕಾರಿ ವೀಣಾ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಹಬಾಳ್ವೆ ಸಂಚಾಲಕ ಸುಂದರ್ ಮಾಸ್ತರ್, ಬಾಲಕೃಷ್ಣ ಶೆಟ್ಟಿ, ವೆರೋನಿಕಾ ಕರ್ನಾಲಿಯೊ, ಅಬ್ದುಲ್ ಅಝೀಝ್ ಉದ್ಯಾವರ ಹಾಗು ಕೆ.ಫಣಿರಾಜ್ ಉಪಸ್ಥಿತರಿದ್ದರು.

Similar News