×
Ad

ಒಂದು ವರ್ಷ ಕಿರಿಯರಾಗಲಿರುವ ದಕ್ಷಿಣ ಕೊರಿಯಾದ ಬಹುತೇಕ ಪ್ರಜೆಗಳು!

Update: 2022-12-09 18:46 IST

ಸಿಯೋಲ್: ದಕ್ಷಿಣ ಕೊರಿಯಾ ತನ್ನ ಪ್ರಜೆಗಳ ವಯೋಮಾನವನ್ನು ಅಳೆಯಲು ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಈ ಕ್ರಮಕ್ಕೆ ಅಲ್ಲಿನ ಸರ್ಕಾರವು ಅನುಮೋದನೆ ನೀಡಿದೆ. ಈ ಕ್ರಮದಿಂದ ಈ ಮುನ್ನ ದಕ್ಷಿಣ ಕೊರಿಯಾದಲ್ಲಿ ಜನಿಸುವ ಪ್ರತಿ ನವಜಾತ ಶಿಶುವನ್ನು ಒಂದು ವರ್ಷದ ಶಿಶು ಎಂದು ಪರಿಗಣಿಸಲಾಗುತ್ತಿದ್ದ ಕೊರಿಯಾ ವಯೋಮಾನ ಪದ್ಧತಿಯು ಪರಿಷ್ಕರಣೆಗೊಳ್ಳಲ್ಲಿದೆ. ಇದರಿಂದ ದಕ್ಷಿಣ ಕೊರಿಯಾದ ಬಹುತೇಕ ಪ್ರಜೆಗಳು ಒಂದು ವರ್ಷ ಕಿರಿಯರಾಗಲಿದ್ದಾರೆ.

ಗುರುವಾರ ಈ ಮಸೂದೆಗೆ ರಾಷ್ಟ್ರೀಯ ಸದನದಲ್ಲಿ ಅಂಗೀಕಾರ ನೀಡಲಾಗಿದ್ದು, ಇದರಿಂದ ವ್ಯಕ್ತಿಯೊಬ್ಬನ ವಯೋಮಾನಕ್ಕೆ ಒಂದು ಅಥವಾ ಎರಡು ವರ್ಷಗಳನ್ನು ಸೇರಿಸುತ್ತಿದ್ದ ವಿಶಿಷ್ಟ ‘ಕೊರಿಯಾ ವಯೋಮಾನ’ ಪದ್ಧತಿಯು ರದ್ದಾಗಲಿದೆ. ದಕ್ಷಿಣ ಕೊರಿಯಾಗೆ ಹೋಲಿಸಿದರೆ ವಿಶ್ವದ ಬಹುತೇಕ ಭಾಗಗಳಲ್ಲಿ ನವಜಾತ ಶಿಶು ಜನಿಸಿದ ವೇಳೆಯಿಂದ ನಂತರದ ಜನ್ಮದಿನದವರೆಗಿನ ಲೆಕ್ಕದಲ್ಲಿ ವಯೋಮಾನ ಎಣಿಕೆ ನಡೆಯುತ್ತಿದೆ.

 “ಈ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿರುವುದರಿಂದ ಮುಂದಿನ ಜೂನ್ ತಿಂಗಳಿನಿಂದ ದೇಶದ ಎಲ್ಲ ಪ್ರಜೆಗಳು ಒಂದು ಅಥವಾ ಎರಡು ವರ್ಷ ಕಿರಿಯರಾಗಲಿದ್ದಾರೆ” ಎಂದು ಮಸೂದೆ ಅಂಗೀಕಾರಗೊಂಡ ನಂತರ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವರ್ಷ ನೂತನ ಅಧ್ಯಕ್ಷ ಯೂನ್ ಸೂಕ್ ಯಿಯೋಲ್ ಅಧಿಕಾರ ವಹಿಸಿಕೊಂಡು ನಂತರ ಈ ಕ್ರಮಕ್ಕೆ ಮುಂದಾಗಿದ್ದು, ಇದು ಜೂನ್ ನಿಂದ ಜಾರಿಗೆ ಬರಲಿದೆ. ಕೊರಿಯಾ ವಯೋಮಾನ ಪದ್ಧತಿಯನ್ನು ರದ್ದು ಮಾಡುವುದರಿಂದ ಆಡಳಿತಾತ್ಮಕ ಹಾಗೂ ಆರೋಗ್ಯ ಸೇವೆಗಳಲ್ಲಿ ಆಗುತ್ತಿರುವ ಗೊಂದಲಗಳು ಕೊನೆಯಾಗಲಿವೆ.

ಈ ಕ್ರಮವು ಈಗಾಗಲೇ ಆಗಿರುವ ಒಪ್ಪಂದ ಪತ್ರಗಳ ಸುತ್ತ ಕಾನೂನು ವ್ಯಾಜ್ಯಗಳು ಉದ್ಭವವಾಗುವುದನ್ನೂ ತಡೆಯಲಿವೆ ಮತ್ತು ಮನೆಯಲ್ಲಿ ಒಂದು ವಯೋಮಾನ ಹಾಗೂ ಜಾಗತಿಕ ಪ್ರಮಾಣೀಕರಣದಲ್ಲಿ ಒಂದು ವಯೋಮಾನ ಹೊಂದಿರುವ ನಾಗರಿಕರ ಪಾಲಿಗೆ ಸರಳವಾಗಲಿದೆ.

ಆದರೆ, ಕೊರಿಯಾ, ಚೀನಾ ಮತ್ತು ಜಪಾನ್ ದೇಶಗಳ ಪ್ರಾಚೀನ ಸಂಸ್ಕೃತಿಗಳ ತುಣುಕಿನಂತೆ ಉಳಿದಿರುವ ಚಾಲ್ತಿ ಪದ್ಧತಿಯನ್ನು ರದ್ದುಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮದಿಂದ ಸಮಸ್ಯೆಗಳು ಉದ್ಭವಿಸಲಿವೆ ಎಂದು ಇತಿಹಾಸಕಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಲಿ ಪದ್ಧತಿಯ ಪ್ರಕಾರ, ನವಜಾತ ಶಿಶುಗಳು ಜನಿಸಿದ ದಿನದಿಂದ ಅವುಗಳನ್ನು ಒಂದು ವರ್ಷದ ಗುಂಪಿಗೆ ಸೇರಿಸಲಾಗುತ್ತದೆ. ಒಂದು ವರ್ಷ ಮುಗಿದ ನಂತರ ಒಂದು ವರ್ಷ ಹಿರಿಯ ಮಕ್ಕಳಾಗುತ್ತವೆ. ಇದರರ್ಥ, ಡಿ. 31ರಂದು ಜನಿಸಿದ ಮಗುವನ್ನು ಒಂದು ವರ್ಷದ ಮಗು ಎಂದು ಪರಿಗಣಿಸಲಾಗುತ್ತದೆ. ಹೊಸ ವರ್ಷ ಬಂದಾಗ ಆ ಮಗುವಿನ ವಯಸ್ಸನ್ನು ಎರಡು ವರ್ಷ ಎಂದು ಪರಿಗಣಿಸಲಾಗುತ್ತದೆ.

ಉತ್ತರ ಕೊರಿಯಾ ದೇಶವು ಈ ಪುರಾತನ ಪದ್ಧತಿಯಿಂದ 1980ರಲ್ಲೇ ಹೊರ ಬಂದಿದ್ದು, ಅಂದಿನಿಂದ ಜಾಗತಿಕ ಪ್ರಮಾಣೀಕರಣವನ್ನು ಅಳವಡಿಸಿಕೊಂಡಿದೆ.

Similar News