ಮತದಾರರ ಪಟ್ಟಿ ಪರಿಷ್ಕರಣೆ; ಉಡುಪಿ ಜಿಲ್ಲೆಯಲ್ಲಿ ಒಟ್ಟು 35,907 ಅರ್ಜಿ ಸಲ್ಲಿಕೆ: ಡಿಸಿ ಕೂರ್ಮಾರಾವ್

Update: 2022-12-09 14:16 GMT

ಉಡುಪಿ, ಡಿ.9: ಜಿಲ್ಲೆಯಲ್ಲಿ ನವೆಂಬರ್ 9ರಿಂದ ಡಿಸೆಂಬರ್ 8ರವರೆಗೆ ನಡೆದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಸಂದರ್ಭದಲ್ಲಿ ಸಾರ್ವಜನಿಕರಿಂದ ಒಟ್ಟು 35,907 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ವೀಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇವುಗಳಲ್ಲಿ 16,804 ಹೊಸ ಮತದಾರರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದ್ದರೆ, 5783 ಅರ್ಜಿಗಳು ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಸಲ್ಲಿಸಲ್ಪಟ್ಟಿವೆ. ಮತದಾರರ ಪಟ್ಟಿಯಲ್ಲಿ ಅಗತ್ಯ ಬದಲಾವಣೆಗಳಿಗಾಗಿ 13,320 ಅರ್ಜಿಗಳು ಸಲ್ಲಿಕೆಯಾಗಿದ್ದು  ಸೇರಿದಂತೆ ಒಟ್ಟಾರೆಯಾಗಿ ಈ ಬಾರಿ 35,907 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಡಿಸಿ ವಿವರಿಸಿದರು.

ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 789, ಕುಂದಾಪುರ 1285, ಉಡುಪಿ 1270, ಕಾಪು 916, ಕಾರ್ಕಳ ಕ್ಷೇತ್ರದಲ್ಲಿ 1523 ಮಂದಿ ಸೇರಿದಂತೆ ಒಟ್ಟು 5783 ಅರ್ಜಿ ಸಲ್ಲಿಕೆಯಾಗಿವೆ.

ಮತದಾರರ ಪಟ್ಟಿಯಲ್ಲಿ ಅಗತ್ಯ ಬದಲಾವಣೆಗಳಿಗಾಗಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ  2274, ಕುಂದಾಪುರ 2287, ಉಡುಪಿ 2466, ಕಾಪು 2411, ಕಾರ್ಕಳ 3882 ಮಂದಿ ಸೇರಿದಂತೆ ಒಟ್ಟು 13320 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸ್ವೀಕರಿಸಿರುವ ಎಲ್ಲಾ ಅರ್ಜಿಗಳ ಪರಿಶೀಲನೆಯಲ್ಲಿ ಯಾವುದೇ ಅರ್ಜಿಗಳು ತಪ್ಪಿ ಹೋಗದಂತೆ ಅತ್ಯಂತ ವ್ಯವಸ್ಥಿತ ಮತ್ತು ಕ್ರಮಬದ್ಧವಾಗಿ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಕುರಿತಂತೆ ಸಾರ್ವಜನಿಕರಿಂದ ಸ್ವೀಕರಿಸಿರುವ ಅರ್ಜಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಆನ್‌ಲೈನ್ ಹೊರತು ಪಡಿಸಿ ನೇರವಾಗಿ ಅರ್ಜಿ ನೀಡಿರುವವರಿಗೆ ಅರ್ಜಿ ಪಡೆದ ಬಗ್ಗೆ ಸ್ವೀಕೃತಿ ನೀಡಿ ಪಾರದರ್ಶಕತೆ ಕಾಯ್ದುಕೊಂಡು, ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಸೂಚಿಸಿದ ಅವರು, ಹೊಸ ಮತದಾರರಿಗೆ ಶೀಘ್ರದಲ್ಲಿ ಎಪಿಕ್ ಕಾರ್ಡ್ ದೊರೆಯು ವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ, ಮತದಾರರ ಪಟ್ಟಿಯಲ್ಲಿ ಮಾಡುವ ಸೇರ್ಪಡೆ, ಆಕ್ಷೇಪಣೆ ಮತ್ತು ತಿದ್ದುಪಡಿಗಳ ಕುರಿತಂತೆ ಸಂಪೂರ್ಣ ವಿವರಗಳನ್ನು ವಿಧಾನಸಭಾ ಕ್ಷೇತ್ರವಾರು ಎಲ್ಲಾ ರಾಜಕೀಯ ಪಕ್ಷಗಳಿಗೂ  ನೀಡುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಭವಿಷ್ಯ ನಿಧಿ ಇಲಾಖೆಯ ಆಯುಕ್ತ ಅಭಿಷೇಕ್ ಮತ್ತು ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು. ವೀಡಿಯೊ ಸಂವಾದದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಸೇರಿದಂತೆ ಎಲ್ಲಾ ಏಳು ತಾಲೂಕುಗಳ ತಹಶೀಲ್ದಾರ್‌ಗಳು ಭಾಗವಹಿಸಿದ್ದರು.

16,804 ಹೊಸ ಮತದಾರರ ಅರ್ಜಿ 

ಜಿಲ್ಲೆಯಲ್ಲಿ ನಡೆದಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ 16,804 ಹೊಸ ಮತದಾರರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ.

ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಲು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ  3,348 ಮಂದಿ, ಕುಂದಾಪುರದಲ್ಲಿ 2984, ಉಡುಪಿಯಲ್ಲಿ 3893, ಕಾಪು 2852 ಹಾಗೂ ಕಾರ್ಕಳ ಕ್ಷೇತ್ರದಲ್ಲಿ 3726 ಮಂದಿ  ಸೇರಿದಂತೆ ಒಟ್ಟು 16804 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಡಿಸಿ ತಿಳಿಸಿದರು. 

Similar News