ಜರ್ಮನಿಯಲ್ಲಿ ಚೀನಾದ ‘ಪೊಲೀಸ್ ಠಾಣೆ’ ಪತ್ತೆ !

Update: 2022-12-09 17:28 GMT

ಬರ್ಲಿನ್, ಡಿ.9: ಜರ್ಮನಿಯಲ್ಲಿ ಕನಿಷ್ಟ 2 ‘ಪೊಲೀಸ್ ಠಾಣೆ’ಗಳನ್ನು ಚೀನಾ ಸ್ಥಾಪಿಸಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದು, ಆಡಳಿತದ ವಿರೋಧಿಗಳಿಗೆ ಕಿರುಕುಳ ನೀಡಲು ಚೀನಾ ಸಾಗರೋತ್ತರ ಕೇಂದ್ರಗಳನ್ನು ಸ್ಥಾಪಿಸಿರುವ ಕುರಿತಾದ ವಿವಾದಕ್ಕೆ ಮತ್ತೆ ಚಾಲನೆ ನೀಡಿದೆ .

ಈ ‘ಠಾಣೆ’ಗಳು ಸ್ಥಿರವಾದ ಕಚೇರಿಯನ್ನು ಹೊಂದಿಲ್ಲ ಮತ್ತು ಚೀನೀ ಸಮುದಾಯದ ಖಾಸಗಿ ವ್ಯಕ್ತಿಗಳು ಇದರ ಮೇಲುಸ್ತುವಾರಿ ವಹಿಸಿದ್ದಾರೆ . ಜರ್ಮನ್ ಪ್ರದೇಶದಲ್ಲಿ ಚೀನಾದ ಅಧಿಕಾರಿಗಳಿಗೆ ಯಾವುದೇ ಕಾರ್ಯನಿರ್ವಾಹಕ ಅಧಿಕಾರವಿಲ್ಲ. ಈ ವಿಷಯದ ಬಗ್ಗೆ ಚೀನಾ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಜರ್ಮನಿಯ ಆಂತರಿಕ ಇಲಾಖೆ ಹೇಳಿದೆ.

ದೇಶದಲ್ಲಿ ಚೀನಾದ ‘ಪೊಲೀಸ್ ಠಾಣೆ’ ಕಾರ್ಯನಿರ್ವಹಿಸುತ್ತಿರುವ ಕುರಿತು ಮೊದಲು ಧ್ವನಿ ಎತ್ತಿದ್ದ ಸಂಸದ ಜೊವಾನಾ ಕಾರ್ಟರ್ ‘ ಇದೊಂದು ಸಂಪೂರ್ಣ ಹಗರಣವಾಗಿದ್ದು, ಈ ಬಗ್ಗೆ ಪ್ರಶ್ನಿಸಿದ ಬಳಿಕ ಸರಕಾರದ ಮಾಹಿತಿ ನೀಡಿದೆ. ಅಲ್ಲದೆ, ಪೊಲೀಸ್ ಠಾಣೆಯ ಉಪಸ್ಥಿತಿಯನ್ನು ಕಣ್ಣುಮುಚ್ಚಿಕೊಂಡು ಒಪ್ಪಿಕೊಂಡಿರುವುದು ಸರಿಯಲ್ಲ. ಜರ್ಮನ್ ಕಾನೂನಿನ ಪ್ರಕಾರ ಅವನ್ನು ಸ್ಥಾಪಿಸದಿದ್ದರೆ ಯಾಕೆ ತಕ್ಷಣ ಕ್ರಮ ಕೈಗೊಂಡಿಲ್ಲ ’ ಎಂದು ಅಸಮಾಧಾನ ಸೂಚಿಸಿದ್ದಾರೆ.

ಚೀನೀ ಕಮ್ಯುನಿಸ್ಟ್ ಪಕ್ಷದ ಟೀಕಾಕಾರರನ್ನು ಗುರಿಯಾಗಿಸಿಕೊಂಡ 54 ಸಾಗರೋತ್ತರ ಪೊಲೀಸ್ ಠಾಣೆಗಳನ್ನು ಚೀನಾ ಸ್ಥಾಪಿಸಿದೆ ಎಂದು ಈ ಹಿಂದೆಯೇ ಸ್ಪೇನ್ ಮೂಲದ ‘ಸೇಫ್‌ಗಾರ್ಡ್ ಡಿಫೆಂಡರ್ಸ್’ ಎಂಬ ಎನ್‌ಜಿಒ ಸಂಘಟನೆ ವರದಿ ಮಾಡಿತ್ತು.

ಚೀನೀ ಆಡಳಿತದ ವಿರುದ್ಧ ಧ್ವನಿ ಎತ್ತಿರುವ ಚೀನಾದ ಸಾಹಿತಿ ಲಿಯಾವೊ ಯಿವು, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಲಿಯು ಕ್ಸಿಯಾಬೊ ಪತ್ನಿ ಲಿಯು ಕ್ಸಿಯಾ ಮುಂತಾದ ಪ್ರಮುಖರಿಗೆ ಜರ್ಮನಿ ಸರಕಾರ ಆಶ್ರಯ ನೀಡಿದೆ

Similar News