ಸಮಾನ ವಿವಾಹಯೋಗ್ಯ ವಯಸ್ಸು: ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದ ಸುಪ್ರೀಂಕೋರ್ಟ್

Update: 2022-12-10 02:41 GMT

ಹೊಸದಿಲ್ಲಿ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ (Uniform Civil Code- UCC) ಬಗೆಗಿನ ಚರ್ಚೆ ನಡೆಯುತ್ತಿರುವ ಮಧ್ಯೆಯೇ, ಎಲ್ಲ ಸಮುದಾಯಗಳ ಪುರುಷ ಮತ್ತು ಮಹಿಳೆಯರಿಗೆ 18 ವರ್ಷವನ್ನು ವಿವಾಹ ಯೋಗ್ಯ ವಯಸ್ಸು ಎಂದು ಪರಿಗಣಿಸುವಂತೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court), ಈ ಸಂಬಂಧ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ ಎಂದು timesofindia.com ವರದಿ ಮಾಡಿದೆ.

ಜತೆಗೆ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ವಿವಾಹವನ್ನು, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅನ್ವಯ ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಬೇಕು ಎಂದೂ ಅರ್ಜಿಯಲ್ಲಿ ಮಹಿಳಾ ಆಯೋಗ ಕೋರಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನು ಒಳಗೊಂಡ ನ್ಯಾಯಪೀಠ, ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಗೀತಾ ಲೂತ್ರಾ ಮಂಡಿಸಿದ ವಾದವನ್ನು ಆಲಿಸಿದ ಬಳಿಕ ಕಾನೂನು ಆಯೋಗದಿಂದಲೂ ಈ ಸಂಬಂಧ ಅಭಿಪ್ರಾಯ ಕೇಳಿದೆ.

ಈ ಮೊದಲು ಕೂಡಾ ಸಂವಿಧಾನದ 44ನೇ ವಿಧಿಯಲ್ಲಿ ನಿಗದಿಪಡಿಸಲಾದ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯ ಬಗ್ಗೆ ಹಲವು ಉಲ್ಲೇಖಗಳನ್ನು ಸುಪ್ರೀಂಕೋರ್ಟ್ ಮಾಡಿತ್ತು. 1985ರ ಶಹಾಬಾನೊ ಪ್ರಕರಣದಲ್ಲಿ, "ಸಮಾನ ನಾಗರಿಕ ಸಂಹಿತೆ, ವಿರುದ್ಧ ಸಿದ್ಧಾಂತಗಳ ಅವಹೇಳನಕಾರಿ ನಿಷ್ಠೆಯನ್ನು ತೊಡೆದುಹಾಕುವ ಮೂಲಕ ದೇಶದ ಏಕತೆಗೆ ನೆರವಾಗುತ್ತದೆ" ಎಂದು ಅಭಿಪ್ರಾಯಪಟ್ಟಿತ್ತು. ಈ ಬಗ್ಗೆ timesofindia.com ವರದಿ ಮಾಡಿದೆ.

Similar News