ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಗಿಂತ ಉತ್ತಮ ಪ್ರದರ್ಶನ: ಆಪ್ ವಿಶ್ವಾಸ

Update: 2022-12-10 07:22 GMT

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಗಿಂತ ಉತ್ತಮ ಪ್ರದರ್ಶನ ತೋರಲಿದ್ದೇವೆ ಎಂದು ರಾಜ್ಯ ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಭಾಸ್ಕರ್ ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ ತೋರಿರುವ ಗಮನಾರ್ಹ ಪ್ರದರ್ಶನದ ಬೆನ್ನಿಗೇ ಮುಂದಿನ ಕೆಲವೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 60 ಕ್ಷೇತ್ರಗಳಲ್ಲಿ ತಮ್ಮ ವರ್ಚಸ್ಸಿನ ಆಧಾರದಲ್ಲಿ ಗೆಲುವು ಸಾಧಿಸಬಲ್ಲ ಅಭ್ಯರ್ಥಿಗಳಿಗಾಗಿ ಆಮ್ ಆದ್ಮಿ ಪಕ್ಷ ಈಗಾಗಲೇ ಶೋಧ ಆರಂಭಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾಸ್ಕರ್ ರಾವ್, “ಗುಜರಾತ್ ಚುನಾವಣೆಯಲ್ಲಿ ಆಪ್ ಪಕ್ಷದ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಅವರೆಲ್ಲ ತಮ್ಮ ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದಾರೆಯೇ ಹೊರತು ಹಣ ಮತ್ತು ತೋಳ್ಬಲದಿಂದಲ್ಲ. ನಾವು ಆ ಪ್ರದರ್ಶನವನ್ನು ರಾಜ್ಯದಲ್ಲೂ ಮುಂದುವರಿಸಲು ಬಯಸುತ್ತೇವೆ” ಎಂದು ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಮ್ಮ ಪಕ್ಷವು ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಈ ಪೈಕಿ ಗೆಲುವು ಸಾಧಿಸಬಲ್ಲ 50-60 ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದು ತಿಳಿಸಿದ್ದಾರೆ.

ನಾವು ಕರ್ನಾಟಕದ ವಿಚಾರದಲ್ಲಿ ತುಂಬಾ ಆಶಾವಾದಿಯಾಗಿದ್ದೇವೆ. ರಾಜ್ಯ ಚುನಾವಣಾ ಪ್ರಚಾರಕ್ಕೆ ಆಪ್ ರಾಷ್ಟ್ರೀಯ ಸಂಚಾಲಕ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗಮಿಸಲಿದ್ದು, ಇದರಿಂದ ಪಕ್ಷದ ಗೆಲುವು, ಸ್ವೀಕಾರಾರ್ಹತೆ ಹಾಗೂ ಅವಕಾಶಗಳು ಉತ್ತಮಗೊಳ್ಳಲಿವೆ ಎಂದು ಹೇಳಿದ್ದಾರೆ.

ಕರ್ನಾಟಕಕ್ಕೆ ಸಂಪೂರ್ಣ ಹೊಸ ಮಾದರಿಯ ಅಗತ್ಯವಿದ್ದು, ರಾಜ್ಯದ ಜನತೆ ಕಾಂಗ್ರೆಸ್, ಬಿಜೆಪಿ ಮತ್ತು ಮೈತ್ರಿಕೂಟಗಳ ಮಾದರಿಯನ್ನು ತಿರಸ್ಕರಿಸಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ನಾವು ಉತ್ತಮ ವರ್ಚಸ್ಸು ಹೊಂದಿರುವ ಅಭ್ಯರ್ಥಿಗಳ ಆಯ್ಕೆಯೆಡೆಗೆ ಗಮನ ಹರಿಸಿದ್ದೇವೆ ಎಂದು ಹೇಳಿರುವ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರೂ ಆದ ಭಾಸ್ಕರ್ ರಾವ್, “ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಪಕ್ಷವು ತನ್ನ ಮತಗಳನ್ನು ಕ್ರೋಡೀಕರಿಸಲು ನಾವೇನೂ ಅಡ್ಡಿಯುಂಟು ಮಾಡಿರಲಿಲ್ಲ” ಎಂದು ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳನ್ನು ಆಪ್ ಕಬಳಿಸಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಆಡಳಿತವಿದ್ದ ದೆಹಲಿ ಮಹಾನಗರ ಪಾಲಿಕೆಯ ಕೈವಶ ಮತ್ತು ಗುಜರಾತ್ ಚುನಾವಣೆಯಲ್ಲಿ ತೋರಿರುವ ಉತ್ತಮ ಪ್ರದರ್ಶನದಿಂದ ಆಪ್ ಕಾರ್ಯಕರ್ತರು ಹುರುಪುಗೊಂಡಿದ್ದಾರೆ ಎಂದು ಕರ್ನಾಟಕದಲ್ಲಿನ ಆ ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ.

Similar News