ಭಾರತದ 25 ವಿದ್ಯಾರ್ಥಿಗಳಿಗೆ ಆರಂಭಿಕ ಕ್ವಾಡ್ ಫೆಲೋಶಿಪ್

Update: 2022-12-10 16:49 GMT

ವಾಷಿಂಗ್ಟನ್,ಡಿ.10: ಭಾರತ ಸೇರಿದಂತೆ ಕ್ವಾಡ್ ದೇಶಗಳಿಂದ ತಲಾ 25 ವಿದ್ಯಾರ್ಥಿಗಳಂತೆ ಒಟ್ಟು 100 ವಿದ್ಯಾರ್ಥಿಗಳ ಮೊದಲ ತಂಡವನ್ನು ಕ್ವಾಡ್ ಫೆಲೋಶಿಪ್‌(Quad Fellowship)ಗಾಗಿ ತಾನು ಅಂಗೀಕರಿಸಿರುವುದಾಗಿ ಅಮೆರಿಕ ಪ್ರಕಟಿಸಿದೆ.

ಆಸ್ಟ್ರೇಲಿಯ,ಜಪಾನ,ಅಮೆರಿಕ ಮತ್ತು ಭಾರತದ ಕ್ವಾಡ್ ಫೆಲೋಗಳ ಮೊದಲ ತಂಡವನ್ನು ಅಭಿನಂದಿಸಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್(Jake Sullivan),ಈ ವಿದ್ಯಾರ್ಥಿಗಳು ಕ್ವಾಡ್ ದೇಶಗಳನ್ನು ಇನ್ನಷ್ಟು ಹತ್ತಿರಕ್ಕೆ ತರಲಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘ಪ್ರತಿ ಕ್ವಾಡ್ ದೇಶದಿಂದ ತಲಾ 25ರಂತೆ 100 ಅಸಾಧಾರಣ ಪ್ರತಿಭೆಯ ವಿದ್ಯಾರ್ಥಿಗಳನ್ನು ಕ್ವಾಡ್ ಫೆಲೋಶಿಪ್‌ಗೆ ಸ್ವಾಗತಿಸಲು ನಮಗೆ ಹೆಮ್ಮೆಯಾಗುತ್ತಿದೆ. ಅವರಲ್ಲಿ ಪ್ರತಿಯೊಬ್ಬರೂ ನಮ್ಮ ನಾಲ್ಕು ಮಹಾನ್ ಪ್ರಜಾಪ್ರಭುತ್ವಗಳ ನಡುವೆ ಆವಿಷ್ಕಾರ ಮತ್ತು ಸಹಭಾಗಿತ್ವ ಮುಂದುವರಿಕೆಗೆ ಹಾಗೂ ಇಂಡೋ-ಪೆಸಿಫಿಕ್ ಮತ್ತು ವಿಶ್ವಕ್ಕಾಗಿ ಉತ್ತಮ ನಾಳೆಯ ನಿರ್ಮಾಣಕ್ಕೆ ಬದ್ಧರಾಗಿದ್ದಾರೆ. ನಮ್ಮ ಭವಿಷ್ಯವು ಉತ್ತಮ ಕೈಗಳಲ್ಲಿದೆ ಎಂಬ ವಿಶ್ವಾಸ ನಮಗಿದೆ ’ಎಂದು ಸುಲಿವಾನ್ ತಿಳಿಸಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ನಡೆದಿದ್ದ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್,ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಥನಿ ಅಲ್ಬಾನೀಸ್,ಜಪಾನಿನ ಪ್ರಧಾನಿ ಫುಮಿಯೊ ಕಿಶಿಡಾ (Fumio Kishida)ಹಾಗೂ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮೊದಲ ಕ್ವಾಡ್ ಫೆಲೋಶಿಪ್ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು.

Similar News