ಹೇಳಲೇಬೇಕಾದ ಸತ್ಯಕ್ಕಾಗಿ ದಿಟ್ಟತನ ತೋರಿದ ನಡಾವ್ ಲ್ಯಾಪಿಡ್

Update: 2022-12-11 04:21 GMT

ನಡಾವ್ ಲ್ಯಾಪಿಡ್ ಒಬ್ಬ ದಿಟ್ಟ ಮತ್ತು ಕೆಚ್ಚೆದೆಯ ಕಲಾವಿದ. ‘ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ’ದಂತಹ ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಲು ಅವರು ಹೆದರುವುದಿಲ್ಲ. ಇಸ್ರೇಲ್‌ನೊಂದಿಗಿನ ತನ್ನ ಪ್ರೀತಿ-ದ್ವೇಷದ ಸಂಬಂಧವನ್ನು ಮರೆಮಾಡುವುದಿಲ್ಲ ಮತ್ತು ಇಸ್ರೇಲಿ ಸಾಮೂಹಿಕ ಆತ್ಮವನ್ನು ಅನಾರೋಗ್ಯದ ಆತ್ಮ ಎಂದು ಕರೆಯಲು ಹಿಂಜರಿಯುವುದಿಲ್ಲ. ಚಿತ್ರೋತ್ಸವದಲ್ಲಿನ ತಮ್ಮ ಹೇಳಿಕೆ ಉಂಟುಮಾಡಿದ ವಿವಾದದ ಬಳಿಕ ಸಂದರ್ಶನದಲ್ಲಿ ಅವರು ಹೇಳಿದ್ದು - ‘‘ಮನಸ್ಸಲ್ಲಿರುವುದನ್ನು ಹೇಳುವ ಅಥವಾ ಸತ್ಯವನ್ನು ಹೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿರುವ ದೇಶಗಳಲ್ಲಿ ಯಾರಾದರೂ ಮಾತನಾಡಲೇಬೇಕಾಗಿದೆ.’’

ಅವರ ಮಾತು ನಮಗೂ, ಹಾಗೆಯೇ ಇಸ್ರೇಲಿಗರಿಗೂ ಸಾಕಷ್ಟು ಚೆನ್ನಾಗಿಯೇ ಅರ್ಥವಾಗಿರುತ್ತದೆ.



ಗೋವಾದಲ್ಲಿ ನಡೆದ ಭಾರತದ 53ನೇ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ ಇಸ್ರೇಲಿ ಚಿತ್ರನಿರ್ದೇಶಕ ನಡಾವ್ ಲ್ಯಾಪಿಡ್ ‘ದಿ ಕಾಶ್ಮೀರ್ ಫೈಲ್ಸ್’ ಮೇಲೆ ತೀವ್ರ ಟೀಕೆಗಳನ್ನು ಮಾಡಿದರು. ಅಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ಚಲನಚಿತ್ರ ವಿಭಾಗಕ್ಕೆ ಸೂಕ್ತವಲ್ಲದ ಆ ಚಿತ್ರವನ್ನು ಪ್ರಚಾರದ್ದು ಮತ್ತು ಅಸಭ್ಯ ಎಂದು ಕರೆದರು. ಕೂಡಲೇ ಅವರು ಭಾರತದಲ್ಲಿರುವ ಇಸ್ರೇಲ್ ರಾಯಭಾರಿಯ ಆಕ್ಷೇಪಕ್ಕೆ ತುತ್ತಾಗಬೇಕಾಯಿತು. ದೇಶದ ಆಹ್ವಾನವನ್ನು ಲ್ಯಾಪಿಡ್ ದುರುಪಯೋಗಪಡಿಸಿಕೊಂಡರೆಂದು ತಕರಾರೆತ್ತಿದ ರಾಯಭಾರಿ, ನಾಚಿಕೆಯಾಗಬೇಕು ಎಂದೂ ಜರೆದರು. ಲ್ಯಾಪಿಡ್ ಹೇಳಿಕೆಗಳು ಜೇನುಗೂಡಿಗೆ ಕಲ್ಲುಹೊಡೆದಂತಿದ್ದವು. ಬಲಪಂಥೀಯ ಶಕ್ತಿಗಳು ಗದ್ದಲವೆಬ್ಬಿಸಿದವು. ಭಾರತೀಯ ಚಿತ್ರನಿರ್ದೇಶಕ ಸುದೀಪ್ತೊ ಸೇನ್ ಹೊರತುಪಡಿಸಿ ತೀರ್ಪುಗಾರರ ಮಂಡಳಿಯ ಇತರ ಸದಸ್ಯರು ಲ್ಯಾಪಿಡ್ ಹೇಳಿಕೆಗೆ ತಾವೂ ಬದ್ಧ ಎಂದು ಬೆಂಬಲಿಸಿದರು. ಸುದೀಪ್ತೊ ಮಾತ್ರ ಲ್ಯಾಪಿಡ್ ಅವರ ಹೇಳಿಕೆ ವೈಯಕ್ತಿಕ ಎಂದರು. ‘ದಿ ಕಾಶ್ಮೀರ್ ಫೈಲ್ಸ್’ ಮೇಲಿನ ಹೇಳಿಕೆಗಳಿಂದಾಗಿ ವಿವಾದಕ್ಕೊಳಗಾಗುವವರೆಗೆ ಭಾರತದಲ್ಲಿ ಯಾರಿಗೂ, ಪ್ರಪಂಚದಾದ್ಯಂತದ ಪ್ರತಿಷ್ಠಿತ ಉತ್ಸವಗಳಲ್ಲಿ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಗೆದ್ದ ಲ್ಯಾಪಿಡ್ ಬಗ್ಗೆ ಗೊತ್ತೇ ಇರಲಿಲ್ಲ. ರಾಷ್ಟ್ರೀಯತೆ ಮತ್ತು ಇಸ್ರೇಲಿ ಗುರುತನ್ನು ಟೀಕಿಸುವ ಲ್ಯಾಪಿಡ್ ಚಿತ್ರಗಳು ಪ್ರಪಂಚದಾದ್ಯಂತ ಮನೆಮಾತಾಗಿವೆ. ಅಂಥ ನಿರ್ದೇಶಕನೊಬ್ಬ ಇಲ್ಲಿನ ಸಿನೆಮಾ ಬಗ್ಗೆ - ಅದರಲ್ಲೂ ಇಲ್ಲಿನ ಆಡಳಿತ ಪಕ್ಷಕ್ಕೆ ಇಷ್ಟವಾಗಿದ್ದ ಸಿನೆಮಾ ಬಗ್ಗೆ ಕಟುವಾಗಿ ಮಾತನಾಡಿದ್ದು ಅತಿಥಿಯ ಸ್ಥಾನದ ದುರುಪಯೋಗವಾಗಿ ಕಂಡಿತು.

ತೀರ್ಪುಗಾರರ ಮಂಡಳಿಯ ಮುಖ್ಯಸ್ಥರೊಬ್ಬರು ಚಿತ್ರಗಳ ಗುಣಮಟ್ಟದ ಬಗ್ಗೆ ತಮ್ಮ ಅಭಿಪ್ರಾಯ ಹೇಳಬಾರದು - ಅದೂ ಅಂತರ್‌ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಎಂದು ನಾವು ಯಾವಾಗ ತೀರ್ಮಾನಿಸಿದೆವು? ಇಲ್ಲಿ ವಿರೋಧ ಎದುರಿಸಿದ ಅವರ ಟೀಕೆಗಳನ್ನೆಲ್ಲ ಬದಿಗಿಟ್ಟು ಲ್ಯಾಪಿಡ್ ಪ್ರತಿನಿಧಿಸುವ ಚಿತ್ರಗಳ ಪ್ರಕಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದು ಸೂಕ್ತ. ಅವರ ಇತ್ತೀಚಿನ ಎರಡು ಚಿತ್ರಗಳು ಸ್ಪಷ್ಟವಾಗಿ ಅವರೇನೆಂಬುದನ್ನು ಹೇಳುತ್ತವೆ. ಏಕೆಂದರೆ ಈ ಎರಡೂ ಚಿತ್ರಗಳು ಅರೆ-ಆತ್ಮಚರಿತ್ರೆಯ ಸ್ವರೂಪವನ್ನು ಹೊಂದಿವೆ. ಅವರ ‘ಸಮಾನಾರ್ಥಕಗಳು’ (2019) ಚಿತ್ರದ ನಾಯಕ ಯೋವ್ ಇಸ್ರೇಲಿನ ಎಲ್ಲ ಸಂಪರ್ಕಗಳನ್ನು ಕಡಿದುಕೊಳ್ಳಲು ಬಯಸಿ ಪ್ಯಾರಿಸಿಗೆ ಹೋಗುತ್ತಾನೆ. ಹೀಬ್ರೂ ಭಾಷೆಯನ್ನು ಸಹ ಮರೆಯಲು ಬಯಸುತ್ತಾನೆ. ಫ್ರೆಂಚ್ ಕಲಿಯಲು ಮತ್ತು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಫ್ರೆಂಚ್ ಆಗಲು ಯತ್ನಿಸುತ್ತಾನೆ. ಆರಂಭಿಕ ದೃಶ್ಯದಲ್ಲಿ, ಯೋವ್ ಪ್ಯಾರಿಸ್‌ನಲ್ಲಿ ಫ್ಲಾಟ್‌ಗೆ ಹೋಗಿ ಸ್ನಾನ ಮುಗಿಸಿಕೊಂಡು ಬಂದರೆ ಲಗೇಜ್ ಕಳವಾಗಿರುತ್ತದೆ. ಯಾವುದೇ ಬಟ್ಟೆಯಿಲ್ಲದೆ, ಬೆತ್ತಲೆಯಾಗಿ ಓಡುತ್ತಾನೆ; ಕೆಲವರ ಬಾಗಿಲುಗಳನ್ನು ಬಡಿಯುತ್ತಾನೆ. ಚಳಿಯಿಂದ ನಡುಗುತ್ತಾ ಬಾತ್‌ಟಬ್‌ಗೆ ಹಿಂದಿರುಗುತ್ತಾನೆ. ಕಡೆಗೆ ನೆರೆಯ ಬರಹಗಾರ್ತಿ ಎಮಿಲಿ ಮತ್ತವಳ ಒಡನಾಡಿ ಕ್ಯಾರೊಲಿನ್ ಅವನನ್ನು ತಮ್ಮ ಫ್ಲಾಟ್‌ಗೆ ಕರೆದೊಯ್ದು ಸಾಧ್ಯವಿರುವ ಎಲ್ಲ ಸಹಾಯ ಮಾಡುತ್ತಾರೆ. ಯೋವ್ ಒಂದು ಪುಟ್ಟ ನಿಘಂಟನ್ನು ಸಮಾನಾರ್ಥಕ ಪದಗಳನ್ನು ತಿಳಿಯಲು ಖರೀದಿಸುತ್ತಾನೆ. ಎಮಿಲಿ ಮತ್ತು ಕ್ಯಾರೊಲಿನ್ ಮಾರ್ಗದರ್ಶನದಲ್ಲಿ ಫ್ರೆಂಚ್ ಕಲಿಯತೊಡಗುತ್ತಾನೆ.

ತನ್ನ ಸಮಯವನ್ನು ಫ್ಲಾಟ್‌ನ ಇತರರೊಂದಿಗೆ ಕಳೆಯಲು ಪ್ರಯತ್ನಿಸುತ್ತಾನೆ. ತನ್ನ ಹಿಂದಿನ ಕಥೆಗಳನ್ನು, ತನ್ನ ಕುಟುಂಬವು ಯುದ್ಧದಿಂದ ಛಿದ್ರವಾದ ಕಥೆಗಳನ್ನು ಹಂಚಿಕೊಳ್ಳುತ್ತಾನೆ. ಚಿತ್ರದ ಅನೇಕ ಸಂಭಾಷಣೆಗಳು ಆರಂಭಿಕ ದೃಶ್ಯವನ್ನೂ ಒಳಗೊಂಡಂತೆ ಉಪಮೆಯಂತಿವೆ. ವಾಸ್ತವವಾಗಿ, ಚಲನಚಿತ್ರವು ಅಂತಹ ಚಿತ್ರಗಳಿಂದ ತುಂಬಿದೆ. ಅನೇಕ ಅಹಿತಕರ ಸಂದರ್ಭಗಳನ್ನು ಎದುರಿಸುತ್ತಿದ್ದರೂ ಯೋವ್ ತನ್ನ ಗತವನ್ನು ಏಕೆ ಮರೆಯಬಯಸುತ್ತಾನೆ? ಹಾಗೆ ರಾಷ್ಟ್ರೀಯತೆಯ ಗುರುತನ್ನು ಅಳಿಸಿಹಾಕುವುದು ತುಂಬಾ ಸರಳವಾಗಿರಬಹುದೇ? ಅವನು ಅದನ್ನು ಹೇಗೆ ಸಾಧಿಸಬಹುದು? ನಾವೆಲ್ಲರೂ ನಮ್ಮ ಭಾಗವಾದ ನೆನಪುಗಳು, ಸ್ಥಳೀಯ ಭಾಷೆ, ಚಿಹ್ನೆಗಳು, ಸನ್ನೆಗಳು ಇತ್ಯಾದಿಗಳನ್ನು ನಮ್ಮ ಮನಸ್ಸಿನಿಂದ ತೆಗೆದುಹಾಕಬಲ್ಲೆವೆ? ಅವೆಲ್ಲವನ್ನೂ ಕಳೆದುಕೊಂಡರೆ ನಮಗೆ ಏನು ಉಳಿಯುತ್ತದೆ? ಇವೆಲ್ಲವೂ ವಿಚಿತ್ರವೆನ್ನಿಸುತ್ತವೆ. ಆದರೆ ನಾವು ಅಂತಹ ಪ್ರಶ್ನೆಗಳನ್ನು ಕೇಳುವಷ್ಟು ಸಂವೇದನಾಶೀಲರಾಗಿದ್ದರೆ ನಾವೆಲ್ಲರೂ ಇದನ್ನು ಎದುರಿಸಬೇಕಾಗುತ್ತದೆ. ಯೋವ್ ಕಥೆಯ ಮೂಲಕ ಲ್ಯಾಪಿಡ್ ಈ ಪ್ರಶ್ನೆಗಳನ್ನು ಎತ್ತುತ್ತಾರೆ.

ಚಿತ್ರದ ನಾಯಕ ತನ್ನ ಇಸ್ರೇಲಿ ಭೂತಕಾಲವನ್ನು ಅಸಹ್ಯದಿಂದ ಹೊರಹಾಕಲು ಬಯಸುವುದೇಕೆ? ‘ನೌ ಟೊರೊಂಟೊ’ ಮ್ಯಾಗಝಿನ್‌ಗೆ ನೀಡಿದ ಸಂದರ್ಶನದಲ್ಲಿ ನಡಾವ್ ಹೇಳುತ್ತಾರೆ: ‘‘ಚಿತ್ರವು ಸಾಮೂಹಿಕ ಇಸ್ರೇಲಿ ಆತ್ಮದ ಬಗ್ಗೆ ಮಾತನಾಡುತ್ತದೆ ಮತ್ತು ಅದು ಅನಾರೋಗ್ಯದ ಆತ್ಮವಾಗಿದೆ. ಇಸ್ರೇಲಿ ಅಸ್ತಿತ್ವದ ಆಳದಲ್ಲಿ ಏನೋ ಸುಳ್ಳು - ನಾರುವಿಕೆ ಇದೆ. ಈ ಇಸ್ರೇಲಿ ಕಾಯಿಲೆ ಅಥವಾ ಸ್ವಭಾವವು ಯುವ ಇಸ್ರೇಲಿಗಳಿಂದ ಉಂಟಾದದ್ದು ಎಂದು ನಾನು ಭಾವಿಸುತ್ತೇನೆ, ಅವರು ಯಾವುದೇ ಪ್ರಶ್ನೆಗಳನ್ನು ಎತ್ತುವುದಿಲ್ಲ ಮತ್ತು ಯಾವುದೇ ಅನುಮಾನಗಳನ್ನು ಹೊಂದಿಲ್ಲ. ಅವರು ಇಸ್ರೇಲಿ ಎಂದು ಅತ್ಯಂತ ಹೆಮ್ಮೆಪಡುತ್ತಾರೆ..’’

ನಾಯಕ ಅಸಹ್ಯಪಡುವುದಕ್ಕೆ ಕಾರಣಗಳು ಚಿತ್ರದಲ್ಲಿ ಸ್ಪಷ್ಟವಾಗಿಲ್ಲ. ಆದರೆ ವಸಾಹತುಶಾಹಿ ಮತ್ತು ವರ್ಣಭೇದ ನೀತಿಯ ಇಸ್ರೇಲಿ ರಾಜ್ಯ ಮತ್ತು ಫೆಲೆಸ್ತ್ತೀನಿಯರ ತಾರತಮ್ಯದ ಸ್ವಭಾವದ ಬಗ್ಗೆ ತಿಳಿದಿರುವ ಯಾರಿಗಾದರೂ ಅವು ಸ್ಪಷ್ಟವಾಗಿವೆ. ಮತ್ತು ಲ್ಯಾಪಿಡ್ ಅದರ ಬಗ್ಗೆ ಸ್ಪಷ್ಟವಾಗಿ ಮತ್ತು ಮುಕ್ತವಾಗಿ ಮಾತನಾಡುತ್ತಾರೆ.
ಅವರ ಇತ್ತೀಚಿನ ಚಲನಚಿತ್ರ ‘ಅಹೆದ್‌ನ ಮೊಣಕಾಲು’ (2021) ಈ ಪ್ರಶ್ನೆಗೆ ಉತ್ತರಿಸುತ್ತದೆ. ಚಿತ್ರದಲ್ಲಿ, 2017ರಲ್ಲಿ ಇಸ್ರೇಲಿ ಸೈನಿಕನಿಗೆ ಕಪಾಳಮೋಕ್ಷ ಮಾಡುವ ವೈರಲ್ ವೀಡಿಯೊದಿಂದಾಗಿ ಸುದ್ದಿಯಾದ ನಿಜಜೀವನದ ಫೆಲಿಸ್ತೀನಿಯನ್ ಅಹೆದ್ ತಮೀಮಿ ಕುರಿತ ಚಿತ್ರದ ತಯಾರಿಯಲ್ಲಿ ವೈ ಎಂಬ ನಿರ್ದೇಶಕನಿದ್ದಾನೆ. ಕೋಪಗೊಂಡ ಇಸ್ರೇಲಿಯೊಬ್ಬ ತಮೀಮಿಗೆ ಕಡೇಪಕ್ಷ ಮೊಣಕಾಲಿಗಾದರೂ ಗುಂಡು ಹಾರಿಸಬೇಕೆಂದು ಒತ್ತಾಯಿಸಿ ಟ್ವೀಟ್ ಮಾಡಿರುವ ವಿಚಾರವನ್ನು ಒಂದು ದೃಶ್ಯದಲ್ಲಿ ತರಲು ವೈ ಬಯಸಿದ್ದಾನೆ. ಮುಖ್ಯ ಪಾತ್ರವನ್ನು ನಿರ್ವಹಿಸುವಾಗ ವೈ, ಇಸ್ರೇಲಿ ಗ್ರಂಥಾಲಯಗಳ ಇಲಾಖೆಯಲ್ಲಿ ಕೆಲಸ ಮಾಡುವ ಅವರ ಸ್ಥಳೀಯ ಅಭಿಮಾನಿಗಳಲ್ಲಿ ಒಬ್ಬರಾದ ಯಹಲೋಮ್ ಆಯೋಜಿಸಿದ ತನ್ನ ಚಿತ್ರಗಳ ಪ್ರದರ್ಶನಕ್ಕೆ ಹಾಜರಾಗಲು ಅರಾವಾ ಪ್ರದೇಶಕ್ಕೆ ಹೋಗುತ್ತಾನೆ.
ಅರಾವಾ ಮರುಭೂಮಿಯ ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ವೈ ತನ್ನ ಚಿತ್ರಗಳಲ್ಲಿ ಒಂದನ್ನು ಪ್ರದರ್ಶಿಸುವ ಮೊದಲು ಇಸ್ರೇಲ್‌ನ ಸಂಸ್ಕೃತಿ ಸಚಿವಾಲಯದಿಂದ ಡಾಕ್ಯುಮೆಂಟ್‌ಗೆ ಸಹಿ ಹಾಕಬೇಕು ಎಂದು ಹೇಳಲಾಗುತ್ತದೆ. ಒಪ್ಪಂದದ ಪ್ರಕಾರ, ಆತನ ಭೇಟಿಯ ಸಮಯದಲ್ಲಿ, ‘ಇಸ್ರೇಲಿ ಇತಿಹಾಸ,’ ‘ಹತ್ಯಾಕಾಂಡ,’ ‘ಕುಟುಂಬ,’ ‘ಪ್ರೀತಿ’ ಮತ್ತು ‘ಶಸ್ತ್ರಾಸ್ತ್ರಗಳಲ್ಲಿ ಒಡನಾಡಿಗಳು’ ಸೇರಿದಂತೆ ಅನುಮೋದಿತ ವಿಷಯಗಳ ಪಟ್ಟಿಯನ್ನು ಮಾತ್ರ ಚರ್ಚಿಸುತ್ತಾನೆ. ಮತ್ತು ‘ಫೆಲೆಸ್ತೀನಿಯನ್ನರು,’ ‘ಉದ್ಯೋಗ’ ಮುಂತಾದ ಅನುಮೋದಿತವಲ್ಲದ ವಿಷಯಗಳ ಇನ್ನೂ ಒಂದು ಪಟ್ಟಿ ಇದೆ.

ಕಲಾವಿದರ ವಿಚಾರದಲ್ಲಿ ಸರಕಾರದ ಮಧ್ಯಪ್ರವೇಶವನ್ನು ನಡಾವ್ ಎಂದೂ ಸಹಿಸಿಲ್ಲ. ‘ಅಹೆದ್‌ನ ಮೊಣಕಾಲು’ ಚಿತ್ರದ ಬಗ್ಗೆ ಅವರು ಹೇಳುವುದು: ‘‘ಸಾಮಾನ್ಯವಾಗಿ, ನನ್ನ ಚಿತ್ರಗಳಲ್ಲಿ ಯಾವುದೇ ಫೆಲೆಸ್ತೀನಿಯರು ಇಲ್ಲ. ಇಸ್ರೇಲ್‌ನ ಆತ್ಮವನ್ನು ಶೋಧಿಸುವುದು ನನಗಿಷ್ಟ. ಫೆಲೆಸ್ತೀನಿಯರು ಈಗಾಗಲೇ ಇಸ್ರೇಲಿ ಆತ್ಮದೊಳಗೆ ಇದ್ದಾರೆ ಎಂದು ನಾನು ಭಾವಿಸುತ್ತೇನೆ. ಇಸ್ರೇಲಿಗರು ಕನ್ನಡಿಯಲ್ಲಿ ನೋಡಿದಾಗ, ಅವರು ಫೆಲೆಸ್ತೀನಿಯರ ಪ್ರತಿಬಿಂಬಗಳನ್ನು ಸಹ ನೋಡುತ್ತಾರೆ. ಭಯ, ಆತಂಕ, ದ್ವೇಷ, ಅಪರಾಧ, ಅನ್ಯತೆಯ ಭಾವನೆಗಳು ಇಸ್ರೇಲಿಗರು ಹೋದಲ್ಲೆಲ್ಲ ಅವರ ಜೊತೆಯಲ್ಲಿಯೇ ನೆರಳಿನಂತಿರುತ್ತವೆ.’’ ಅವರ ಎರಡೂ ಅರೆ-ಆತ್ಮಚರಿತ್ರೆಯ ಸ್ವರೂಪದ ಚಿತ್ರಗಳ ಸಾಮಾನ್ಯ ಎಳೆಯು ಸಾಮೂಹಿಕ ಇಸ್ರೇಲಿ ಆತ್ಮದ ಹುಡುಕಾಟ ಮತ್ತು ಈ ಆತ್ಮ ಫೆಲೆಸ್ತೀನಿಯರಿಂದ ಹೊರತಾದುದಲ್ಲ.
ನಡಾವ್ ಲ್ಯಾಪಿಡ್ ಒಬ್ಬ ದಿಟ್ಟ ಮತ್ತು ಕೆಚ್ಚೆದೆಯ ಕಲಾವಿದ. ‘ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ’ದಂತಹ ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಲು ಅವರು ಹೆದರುವುದಿಲ್ಲ. ಇಸ್ರೇಲ್‌ನೊಂದಿಗಿನ ತನ್ನ ಪ್ರೀತಿ-ದ್ವೇಷದ ಸಂಬಂಧವನ್ನು ಮರೆಮಾಡುವುದಿಲ್ಲ ಮತ್ತು ಇಸ್ರೇಲಿ ಸಾಮೂಹಿಕ ಆತ್ಮವನ್ನು ಅನಾರೋಗ್ಯದ ಆತ್ಮ ಎಂದು ಕರೆಯಲು ಹಿಂಜರಿಯುವುದಿಲ್ಲ. ಚಿತ್ರೋತ್ಸವದಲ್ಲಿನ ತಮ್ಮ ಹೇಳಿಕೆ ಉಂಟುಮಾಡಿದ ವಿವಾದದ ಬಳಿಕ ಸಂದರ್ಶನದಲ್ಲಿ ಅವರು ಹೇಳಿದ್ದು - ‘‘ಮನಸ್ಸಲ್ಲಿರುವುದನ್ನು ಹೇಳುವ ಅಥವಾ ಸತ್ಯವನ್ನು ಹೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿರುವ ದೇಶಗಳಲ್ಲಿ ಯಾರಾದರೂ ಮಾತನಾಡಲೇಬೇಕಾಗಿದೆ.’’
ಅವರ ಮಾತು ನಮಗೂ, ಹಾಗೆಯೇ ಇಸ್ರೇಲಿಗರಿಗೂ ಸಾಕಷ್ಟು ಚೆನ್ನಾಗಿಯೇ ಅರ್ಥವಾಗಿರುತ್ತದೆ.

Similar News