ಫಿಫಾ ವಿಶ್ವಕಪ್: ನಾಲ್ಕರ ಘಟ್ಟಕ್ಕೆ ಮುನ್ನಡೆದ ಫ್ರಾನ್ಸ್; ಇಂಗ್ಲೆಂಡ್‍ಗೆ ಸೋಲು

Update: 2022-12-11 01:56 GMT

ಹೊಸದಿಲ್ಲಿ: ಇಬ್ಬರು ದಾಖಲೆ ಗೋಲು ಗಳಿಸಿದ ಆಟಗಾರು, ಎರಡು ವೈರುದ್ಧ್ಯ ಫಲಿತಾಂಶ- ಕತರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯ ಫ್ರಾನ್ಸ್ ಹಾಗೂ ಇಂಗ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಹಲವು ರೋಚಕ ತಿರುವುಗಳಿಗೆ ಕಾರಣವಾಯಿತು.

ಫ್ರಾನ್ಸ್‌ನ ಒಲಿವಿಯರ್ ಗಿರಾಡ್ ಗೆಲುವಿನ ಗೋಲು ಗಳಿಸಿದರೆ, ಇಂಗ್ಲೆಂಡಿನ ಹ್ಯಾರಿ ಕೇನ್ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಇಂಗ್ಲೆಂಡ್ ಸವಾಲನ್ನು 2-1 ಗೋಲುಗಳಿಂದ ಬದಿಗೊತ್ತಿದ ಫ್ರಾನ್ಸ್ ಸೆಮಿಫೈನಲ್ ತಲುಪಿತು.

ಅಲ್ ಬಯಾತ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಮೊಟ್ಟಮೊದಲ ಬಾರಿಗೆ ಸೆಮಿಫೈನಲ್ ತಲುಪಿದ ಮೊರಾಕ್ಕೊ ವಿರುದ್ಧ ಮುಂದಿನ ಸುತ್ತಿನಲ್ಲಿ ಸೆಣೆಸಲಿದೆ. ಶನಿವಾರ ಪೋರ್ಚ್‍ಗಲ್ ತಂಡವನ್ನು ಸೋಲಿಸಿ ಅದ್ಭುತ ಸಾಧನೆ ಮಾಡಿದ ಮೊರಾಕ್ಕೊ, ಫೈನಲ್‍ನಲ್ಲಿ ಸ್ಥಾನ ಪಡೆಯಲು ಗುರುವಾರ ಹಾಲಿ ಚಾಂಪಿಯನ್ನರ ಜತೆ ಸೆಣೆಸಬೇಕಿದೆ.

ಆಟ ಮುಗಿಯಲು ಕೇವಲ 12 ನಿಮಿಷಗಳಿದ್ದಾಗ ಫ್ರಾನ್ಸ್‌ನ ಅತ್ಯಧಿಕ ಗೋಲುಗಳ ಸರದಾರ ಗಿರಾಡ್ ಗೋಲು ಗಳಿಸಿದರು. ಇದಕ್ಕೂ ಮುನ್ನ ಇಂಗ್ಲೆಂಡಿನ ಹ್ಯಾರಿ ಕೇನ್ 54ನೇ ನಿಮಿಷದಲ್ಲಿ ಸ್ಪಾಟ್ ಕಿಕ್ ಮೂಲಕ ಗೋಲು ಗಳಿಸಿ 1-1 ಸಮಬಲಕ್ಕೆ ಕಾರಣರಾಗಿದ್ದರು. 17ನೇ ನಿಮಿಷದಲ್ಲೇ ಅರುಲಿನ್ ಚೊಮೇನಿಯವರ ಅದ್ಭುತ ಗೋಲಿನ ಮೂಲಕ ಫ್ರಾನ್ಸ್ 1-0 ಮುನ್ನಡೆ ಗಳಿಸಿದರೂ, ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ಅದ್ಭುತ ಪ್ರದರ್ಶನ ತೋರಿತು.

53ನೇ ಅಂತರರಾಷ್ಟ್ರೀಯ ಗೋಲು ಗಳಿಸುವ ಮೂಲಕ ಕೇನ್ ಅವರು ಇಂಗ್ಲೆಂಡ್ ಪರ ಅತ್ಯಧಿಕ ಗೋಲು ಗಳಿಸಿದ ವೇನ್ ರೂನಿ ಅವರ ದಾಖಲೆಯನ್ನು ಸರಿಗಟ್ಟಿದರು. ಆದರೆ 84ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಅನ್ನು ಫ್ರಾನ್ಸ್‌ನ ಕ್ರಾಸ್‍ಬಾರ್‍ನ ಮೇಲೆ ಹೊಡೆಯುವ ಮೂಲಕ ಗುರಿ ತಪ್ಪಿದರು. ಇದರಿಂದಾಗಿ ಹೆಚ್ಚುವರಿ ಸಮಯಕ್ಕೆ ಆಟವನ್ನು ವಿಸ್ತರಿಸುವ ಇಂಗ್ಲೆಂಡ್ ಕನಸು ಕೈಗೂಡಲಿಲ್ಲ.

Similar News