10 ತಿಂಗಳ ಮಗುವನ್ನು ಕಾರಿನಿಂದ ಹೊರಕ್ಕೆಸೆದು ತಾಯಿ ಮೇಲೆ ಲೈಂಗಿಕ ಕಿರುಕುಳ

Update: 2022-12-11 03:00 GMT

ಮಹಾರಾಷ್ಟ್ರ: ಹತ್ತು ತಿಂಗಳ ಹೆಣ್ಣುಮಗುವನ್ನು ಕಾರಿನಿಂದ ಹೊರಕ್ಕೆಸೆದು ತಾಯಿಯ ಮೇಲೆ ಲೈಂಗಿಕ ಕಿರುಕುಳ ಎಸಗಿದ ಪ್ರಕರಣ ಮುಂಬೈ- ಅಹ್ಮದಾಬಾದ್ ಹೆದ್ದಾರಿಯ ಪಾಲ್ಗರ್ ಎಂಬಲ್ಲಿ ಶನಿವಾರ ನಡೆದಿದೆ ಎಂದು ndtv.com ವರದಿ ಮಾಡಿದೆ.

ಕಾರಿನಿಂದ ಎಸೆಯಲ್ಪಟ್ಟ ಮಗು ಮೃತಪಟ್ಟಿದೆ. ತಾಯಿಯನ್ನೂ ಕಾರಿನಿಂದ ಹೊರಕ್ಕೆ ತಳ್ಳಲಾಗಿದ್ದು, ತಾಯಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮಹಿಳೆ ಹಾಗೂ ಆಕೆಯ ಮಗಳು ವಾಡಾ ತಾಲೂಕಿನ ಪೊಶೆರೆ ಎಂಬಲ್ಲಿಗೆ ಕಾರಿನಲ್ಲಿ ಹೋಗುತ್ತಿದ್ದರು. ಇತರ ಕೆಲ ಪ್ರಯಾಣಿಕರ ಜತೆ ಕಾರಿನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಮಾರ್ಗಮಧ್ಯದಲ್ಲಿ ಕಾರಿನ ಚಾಲಕ ಮತ್ತು ಸಹ ಪ್ರಯಾಣಿಕರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದರು ಎಂದು ಆಪಾದಿಸಲಾಗಿದೆ.

ಮಹಿಳೆ ಪ್ರತಿರೋಧ ತೋರಿದಾಗ, ಮಹಿಳೆಯ ಕೈಯಿಂದ ಮಗುವನ್ನು ಕಿತ್ತುಕೊಂಡು ವೇಗವಾಗಿ ಹೋಗುತ್ತಿದ್ದ ಕಾರಿನಿಂದ ಎಸೆದಿದ್ದರು ಎಂದು ಮಹಿಳೆ ಪೊಲೀಸರಿಗೆ ವಿವರಿಸಿದ್ದಾರೆ.

ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದೆ. ಮಹಿಳೆಯನ್ನೂ ಕಾರಿನಿಂದ ಹೊರಕ್ಕೆ ತಳ್ಳಲಾಗಿದ್ದು, ಆಕೆಗೂ ಗಂಭೀರ ಗಾಯಗಳಾಗಿವೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾಂಡ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ndtv.com ವರದಿ ಮಾಡಿದೆ.

Similar News