ವಿಶ್ವಕಪ್: ರೊನಾಲ್ಡೊರನ್ನು ಆರಂಭದಲ್ಲಿ ಕೈಬಿಟ್ಟಿದ್ದಕ್ಕೆ ಪೋರ್ಚುಗಲ್ ಕೋಚ್ ಪ್ರತಿಕ್ರಿಯಿಸಿದ್ದು ಹೀಗೆ

Update: 2022-12-11 05:55 GMT

ದೋಹಾ: ಈಗ ನಡೆಯುತ್ತಿರುವ FIFA ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಮೊರಾಕೊ ವಿರುದ್ಧ ತಮ್ಮ ತಂಡವು ಸೋತ ನಂತರ ಸ್ಟಾರ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊCristiano Ronaldo  ಅವರನ್ನು ಆರಂಭಿಕ 11 ರ ಬಳಗದಲ್ಲಿ ಸೇರಿಸದ ಬಗ್ಗೆ ತನಗೆ ಯಾವುದೇ ವಿಷಾದವಿಲ್ಲ ಎಂದು  ಪೋರ್ಚುಗಲ್ ಕೋಚ್ ಫೆರ್ನಾಂಡೋ ಸ್ಯಾಂಟೋಸ್ ಅವರು ಹೇಳಿದ್ದಾರೆ.

 ಕ್ವಾರ್ಟರ್‌ಫೈನಲ್‌ನಲ್ಲಿ ಪೋರ್ಚುಗಲ್‌ನನ್ನು 1-0 ಗೋಲುಗಳಿಂದ ಸೋಲಿಸಿ ವಿಶ್ವಕಪ್‌ನ ಕೊನೆಯ ನಾಲ್ಕಕ್ಕೆ ಅರ್ಹತೆ ಪಡೆದ ಮೊದಲ ಆಫ್ರಿಕನ್-ಅರಬ್  ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮೊರೊಕ್ಕೊ ಶನಿವಾರ ಇತಿಹಾಸ ಬರೆದಿದೆ.

"ನಮ್ಮ ಆಟಗಾರರು ದುಃಖಿತರಾಗಿದ್ದಾರೆ. ಕ್ರಿಸ್ಟಿಯಾನೊ ಓರ್ವ ಶ್ರೇಷ್ಠ ಆಟಗಾರ ಹಾಗೂ  ನಾವು ಅಗತ್ಯವೆಂದು ಭಾವಿಸಿದಾಗ ಅವರು ಬಂದರು. ಆದರೆ  ಅವರನ್ನು ಆರಂಭದಲ್ಲಿಯೇ ಕಣಕ್ಕೆ ಇಳಿಸದ ಬಗ್ಗೆ ನಾನು  ವಿಷಾದಿಸುವುದಿಲ್ಲ’’ ಎಂದು ಸ್ಕೈ ಸ್ಪೋರ್ಟ್ಸ್ ಗೆ ಸ್ಯಾಂಟೋಸ್ ತಿಳಿಸಿದರು.

ಮೊರೊಕ್ಕೊ ವಿರುದ್ಧದ ಕ್ವಾರ್ಟರ್ ಫೈನಲ್ ನಲ್ಲಿ ರೊನಾಲ್ಡೊ ಐವತ್ತು ನಿಮಿಷಗಳ ನಂತರ ಮೈದಾನಕ್ಕೆ ಆಗಮಿಸಿದರು.  ಆದರೆ ಅವರಿಗೆ ಫಲಿತಾಂಶದಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡಲು ಸಾಧ್ಯವಾಗಲಿಲ್ಲ 37 ವರ್ಷದ ರೊನಾಲ್ಡೊಗೆ ವಿಶ್ವಕಪ್ ಗೆಲ್ಲುವ ಕನಸುಗಳು ಛಿದ್ರಗೊಂಡಿದ್ದರಿಂದ ಮೈದಾನದಲ್ಲಿ  ಕಣ್ಣೀರಿಟ್ಟರು.

ಮೊರೊಕ್ಕೊ ತಂಡ 42ನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿದ್ದು, ಕೊನೆಯ ತನಕ ಈ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಪೋರ್ಚುಗಲ್ ನ್ನು ಸೋಲಿಸಿ ಶಾಕ್ ನೀಡಿದ ಮೊರೊಕ್ಕೊ  FIFA ವಿಶ್ವಕಪ್ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡಿತು.

ಮೊರೊಕ್ಕೊ ತಂಡ ಪೋರ್ಚುಗಲ್ ವಿರುದ್ಧ ವಿಶ್ವಕಪ್ ನಲ್ಲಿಆಡಿರುವ ಮೂರು ಪಂದ್ಯಗಳಲ್ಲಿ ಎರಡನ್ನು ಜಯಿಸಿ  ತನ್ನ ದಾಖಲೆಯನ್ನು ಉತ್ತಮಪಡಿಸಿಕೊಂಡಿತು.

ಪೋರ್ಚುಗಲ್‌ಗೆ ಸೋಲು ರೊನಾಲ್ಡೊ ಪಾಲಿಗೆ ತುಂಬಾ ನಿರಾಶಾದಾಯಕವಾಗಿದೆ. ಅವರ ವಯಸ್ಸನ್ನು ಗಮನಿಸಿದರೆ ಬಹುಶಃ  ಈ ಬಾರಿ ಅವರು ಕೊನೆಯ ವಿಶ್ವಕಪ್ ಅನ್ನು ಆಡಿದ್ದಾರೆ.

Similar News