ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ 10, 12 ತರಗತಿಗಳ ಪರೀಕ್ಷಾ ವೇಳಾಪಟ್ಟಿ ನಕಲಿ ಸಿಬಿಎಸ್‌ಇ ಸ್ಪಷ್ಟನೆ

Update: 2022-12-11 16:46 GMT

ಹೊಸದಿಲ್ಲಿ,ಡಿ.11: ಸಿಬಿಎಸ್‌ಇ 10 ಹಾಗೂ 12ನೇ ತರಗತಿಯ ಪರೀಕ್ಷೆಯ ದಿನಾಂಕಗಳೆಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವೇಳಾಪಟ್ಟಿಯು ನಕಲಿಯೆಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ರವಿವಾರ ತಿಳಿಸಿದೆ.

 ಸಿಬಿಎಸ್‌ಇ ಮಂಡಳಿಯು ಪರೀಕ್ಷಾದಿನಾಂಕದ ವೇಳಾಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ ಎಂದು ಅದು ಸ್ಪಷ್ಟಪಡಿಸಿದೆ,.‘‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಿಬಿಎಸ್‌ಇ ಪರೀಕ್ಷಾ ವೇಳಾಪಟ್ಟಿಗಳು ನಕಲಿಯಾಗಿವೆ. ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಹಾಗೂ ಈ ಬಗ್ಗೆ ಅಧಿಕೃತ ಮಾಹಿತಿಗಾ ವಿದ್ಯಾರ್ಥಿಗಳು ಹಾಗೂ ಪಾಲಕರು ಕಾಯಬೇಕಾಗಿದೆ’’ ಎಂದು ಪರೀಕ್ಷಾ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 10 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳ ಥಿಯರಿ ಪರೀಕ್ಷೆಗಳನ್ನು 2023ರ ಫೆಬ್ರವರಿ 15ರಿಂದ ತಾನು ಆಯೋಜಿಸುವುದಾಗಿ ಸಿಬಿಎಸ್‌ಇ ಮಂಡಳಿಯು ಈ ಮೊದಲು ಪ್ರಕಟಿಸಿತ್ತು.

‘‘ಜನವರಿ 1ರಿಂದ ಪ್ರಾಕ್ಟೀಕಲ್ ಪರೀಕ್ಷೆಗಳು ಆರಂಭವಾಗಲಿವೆ. ಅಲ್ಲಿಯವರೆಗೆ ಪಠ್ಯಗಳ ಬೋಧನೆಯನ್ನು ಪೂರ್ಣಗೊಳಿಸುವಂತೆ ಶಾಲೆಗಳಿಗೆ ನಿರ್ದೇಶನವನ್ನು ನೀಡಲಾಗಿದೆ. 12ನೇ ತರಗತಿಯ ಪ್ರಾಕ್ಟೀಕಲ್ ಪರೀಕ್ಷೆಗಳನ್ನು ಮಂಡಳಿಯು ನೇಮಿಸಿದ ಬಾಹ್ಯ ಪರೀಕ್ಷಕರಿಂದ ಹಾಗೂ 10ನೇ ತರಗತಿಯ ಪ್ರಾಕ್ಟೀಕಲ್ ಪರೀಕ್ಷೆಗಳನ್ನು ಆಂತರಿಕ ಪರೀಕ್ಷಕರಿಂದ ನಡೆಸಲಾಗುವುದು’’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸಿಬಿಎಸ್‌ಇ 10 ಹಾಗೂ 12ನೇ ತರಗತಿಯ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಅಂಕ ನೀಡಿಕೆಯ ಕ್ರಮಗಳನ್ನು ಕೂಡಾ ಮಂಡಳಿಯು ಬಿಡುಗಡೆಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

Similar News