ಜನಮರುಳು ಕಾರ್ಯಕ್ರಮಗಳಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ : ಪ್ರಧಾನಿ ಮೋದಿ

Update: 2022-12-11 16:53 GMT

ನಾಗಪುರ,ಡಿ.11:ದೇಶಕ್ಕೆ ಸುಸ್ಥಿರವಾದ ಅಭಿವೃದ್ಧಿಯ ಅಗತ್ಯವಿದೆಯೇ ಹೊರತು ಜನಮರುಳು ಕಾರ್ಯಕ್ರಮಗಳಿಂದ ಅಧಿಕಾರ ಹಿಡಿಯಲು ಯತ್ನಿಸುವ ಶಾರ್ಟ್‌ಕಟ್ ರಾಜಕಾರಣವಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಪ್ರತಿಪಾದಿಸಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ದೇಶದ ಆರ್ಥಿಕತೆಯನ್ನು ನಾಶಪಡಿಸಲು ಯತ್ನಿಸುತ್ತಿವೆಯೆಂದು ಅವರು ಆರೋಪಿಸಿದ್ದಾರೆ.

ಈ ಹಿಂದೆ ತೆರಿಗೆ ಪಾವತಿದಾರರ ಅಪಾರ ಹಣವು ಭ್ರಷ್ಟಾಚಾರ ಹಾಗೂ ವೋಟ್‌ಬ್ಯಾಂಕ್ ರಾಜಕೀಯದಲ್ಲಿ ವ್ಯರ್ಥವಾಗುತ್ತಿತ್ತೆಂದು ಅವರು ತಿಳಿಸಿದ್ದಾರೆ. 75 ಸಾವಿರ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಉದ್ಘಾಟನೆಯ ಬಳಿಕ ಸುದ್ದಿಗಾರರ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಲ್ಲಿ ನಡೆಸಲಾದ ಮೂಲಸೌಕರ್ಯ ಅಭಿವೃದ್ಧಿಗಳನ್ನು ಮಾನವೀಯ ಸಂವೇದನೆಯೊಂದಿಗೆ ಮಾಡಲಾಗಿದೆಯೆಂದು ಹೇಳಿದರು.

 ಸಂಘಟಿತ ಶಕ್ತಿ,ಪ್ರಗತಿ ಹಾಗೂ ಎಲ್ಲಾ ರಾಜ್ಯಗಳ ವಿಕಸನದ ಮೂಲಕ ‘ಅಭಿವೃದ್ಧಿ ಹೊಂದಿದ ಭಾರತ’ ಸಾಕಾರಗೊಂಡಿದೆ. ಪ್ರಗತಿಯ ಬಗ್ಗೆ ನಾವು ಸಂಕುಚಿತ ನಿಲುವನ್ನು ತಾಳಿದಲ್ಲಿ, ಅವಕಾಶಗಳು ಕೂಡಾ ಸೀಮಿತವಾಗಿರುತ್ತವೆಯೆಂದು ಅವರು ಹೇಳಿದರು.

ಕಳೆದ ಎಂಟು ವರ್ಷಗಳಲ್ಲಿ ‘ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಹಾಗೂ ಸಬ್ ಕಾ ಪ್ರಯಾಸ್ ’(ಎಲ್ಲರ ಜೊತೆಗೂಡಿ, ಎಲ್ಲಾ ವಿಶ್ವಾಸ ಹಾಗೂ ಪ್ರಯತ್ನದೊಂದಿಗೆ) ಎಂಬ ಧೋರಣೆಯ ಮೂಲಕ ನಾವು ಜನರ ಮನಸ್ಥಿತಿಯನ್ನು ಬದಲಾಯಿಸಿದ್ದೇವೆಎಂದು ಮೋದಿ ತಿಳಿಸಿದರು.

 ನಾಗಪುರದಲ್ಲಿ ಇಂದು ಚಾಲನೆ ನೀಡಲಾದ ಹಾಗೂ ಉದ್ಘಾಟಿಸಲಾದ ಯೋಜನೆಗಳು ಅಬಿವೃದ್ಧಿಯ ಸಮಗ್ರ ದೃಷ್ಟಿಕೋನವನ್ನು ನೀಡಿವೆ ಎಂದು ಪ್ರಧಾನಿ ತಿಳಿಸಿದರು.

 ಶಾರ್ಟ್‌ಕಟ್ ರಾಜಕೀಯ, ತೆರಿಗೆ ಪಾವತಿದಾರರ ಹಣ ಲೂಟಿ ಮಾಡುವ ಹಾಗೂ ಸುಳ್ಳು ಭರವಸೆಗಳ ಮೂಲಕ ಅಧಿಕಾರವನ್ನು ಕಬಳಿಸಲು ಯತ್ನಿಸುವ ರಾಜಕಾರಣಿಗಳ ಬಗ್ಗೆ ಜನತೆ ಎಚ್ಚರವಹಿಸಬೇಕೆಂದು ಅವರು ಕೆ ನೀಡಿದರು. ಶಾರ್ಟ್‌ಕಟ್ ರಾಜಕಾರಣದ ಮೂಲಕ ದೇಶ ಅಭಿವೃದ್ಧಿಯಾಗಲಾರದೆಂದವರು ಪ್ರತಿಪಾದಿಸಿದರು.

‘‘ ಕೆಲವು ರಾಜಕೀಯ ಪಕ್ಷಗಳು ದೇಶದ ಆರ್ಥಿಕತೆಯನ್ನು ನಾಶಪಡಿಸಲು ಯತ್ನಿಸುತ್ತಿವೆ ಹಾಗೂ ಜನರು ಇಂತಹ ರಾಜಕಾರಣಿಗಳು ಹಾಗೂ ಪಕ್ಷಗಳನ್ನು ಬಯಲಿಗೆಳೆಯಬೇಕು. ಶಾರ್ಟ್‌ಕಟ್ ನೀತಿಗಳನ್ನು ಅನುಸರಿಸುವ ಬದಲು ಸುಸ್ಥಿರವಾದ ಅಭಿವೃದ್ಧಿಯ ಬಗ್ಗೆ ಗಮನಹರಿಸಬೇಕೆಂದು ನಾನು ಎಲ್ಲಾ ರಾಜಕೀಯ ಮುಖಂಡರುಗಳಿಗೆ ಮನವಿ ಮಾಡುತ್ತೇನೆ. ಸುಸ್ಥಿರವಾದ ಅಭಿವೃದ್ಧಿಯಿಂದ ಮಾತ್ರವೇ ನೀವು ಚುನಾವಣೆಗಳಲ್ಲಿ ಜಯಗಳಿಸಲು ಸಾಧ್ಯ’’ ಎಂದು ಪ್ರಧಾನಿ ರಾಜಕೀಯ ಪಕ್ಷಗಳಿಗೆ ಕಿವಮಾತು ಹೇಳಿದರು.

Similar News