ಸಾಹಿತ್ಯ ಉತ್ಸವದ ಅವಿಸ್ಮರಣೀಯ ಕ್ಷಣಗಳು

Update: 2022-12-12 06:36 GMT

ಬೆಂಗಳೂರು ಸಾಹಿತ್ಯ ಉತ್ಸವ ವಿಭಿನ್ನ ಧಾರೆಗಳ ಸಂವಾದದ ವೇದಿಕೆಯಾಯಿತು. ತಳ ಸಮುದಾಯಗಳ ಸಂವೇದನೆಗಳಿಗೆ ಅವಕಾಶ ದೊರಕಿತು. ಹೀಗೆ ಎಲ್ಲರನ್ನು ಒಳಗೊಂಡಾಗ ಸಾಹಿತ್ಯ ಕಾರ್ಯಕ್ರಮಗಳು ಅರ್ಥ ಪೂರ್ಣವಾಗುತ್ತವೆ.


ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಸಮ್ಮೇಳನ, ಸಭೆ, ಸಮಾರಂಭದಲ್ಲಿ ಸಾಧ್ಯವಾದಷ್ಟು ಪಾಲ್ಗೊಳ್ಳುತ್ತ ಬಂದ ನಾನು ಇತ್ತೀಚಿನ ವರ್ಷಗಳಲ್ಲಿ ಮೇ ಸಾಹಿತ್ಯ ಸಮ್ಮೇಳನ ಬಿಟ್ಟರೆ ಎಲ್ಲೂ ಹೊಗಿರಲಿಲ್ಲ. ಬಹಳ ದಿನಗಳ ನಂತರ ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಸಾಹಿತ್ಯ ಉತ್ಸವದಲ್ಲಿ ಮೊದಲ ದಿನ ಹೋಗಿದ್ದೆ. ಇಂಥ ಸಮ್ಮೇಳನಗಳಿಗೆ ಹೋಗುವುದರಿಂದ ಅಲ್ಲಿ ನಡೆಯುವ ಭಾಷಣ,ಉಪನ್ಯಾಸಗಳ ಜೊತೆ ಅಪರೂಪದ ಗೆಳೆಯರು ಸಿಗುತ್ತಾರೆ. ಹೀಗಾಗಿ ಸಭಾಂಗಣದ ಆಚೆ ಮಿನಿಗೋಷ್ಠಿಗಳು ನಡೆಯುತ್ತಲೇ ಇರುತ್ತವೆ.

ಸುಮಾರು 49 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ನಾವೇ ಕೆಲವು ಯುವಕರು ಅಂದಿನ ಅಲ್ಲಿನ ಕಮ್ಯುನಿಸ್ಟ್ ನಗರಸಭಾಧ್ಯಕ್ಷ ಪಂಪಾಪತಿ ಅವರ ನೆರವಿನಿಂದ ಸಂಘಟಿಸಿದ ಪ್ರಗತಿ ಪಂಥ ಸಾಹಿತ್ಯ ಸಮ್ಮೇಳನ ಕಾಲದಿಂದಲೂ ನನಗೆ ಕನ್ನಡ ಸಾರಸ್ವತ ಲೋಕದ ಒಡನಾಟ. ಮೊದಲು ಕತೆ, ಕವನ ಬರೆಯುತ್ತಿದ್ದ ನಾನು 1974ರಲ್ಲಿ ಪತ್ರಿಕಾ ವೃತ್ತಿಗೆ ಬಂದ ನಂತರ ಲೇಖನ, ವರದಿ ಬರೆದು ಅದೇ ಅಭ್ಯಾಸವಾಯಿತು. ಆಗ ಒಮ್ಮೆ ಹಿರಿಯ ಸಾಹಿತಿ ನಿರಂಜನ ಅವರ ಜೊತೆ ಮಾತನಾಡುತ್ತಿದ್ದಾಗ ಲೇಖಕ ಪತ್ರಕರ್ತನಾದರೆ ಸಾಹಿತ್ಯ ಬರವಣಿಗೆ ಸತ್ವ ಹೀನವಾಗುತ್ತದೆ ಎಂದು ಅವರು ಹೇಳಿದ ಮಾತು ನನ್ನ ಪಾಲಿಗೆ ನಿಜವಾಯಿತು.
ಆದರೆ, ಬರಹದ ಶೈಲಿ ಬದಲಾದರೂ ಸಾಹಿತ್ಯದ ಓದು, ಆಸಕ್ತಿ ಕಡಿಮೆ ಯಾಗಿಲ್ಲ . ಹೀಗಾಗಿ ಈಗಲೂ ಸಾಹಿತ್ಯ ಸಮ್ಮೇಳನಗಳನ್ನು ತಪ್ಪಿಸಿಕೊಳ್ಳುವುದಿಲ್ಲ.

ಕಳೆದ ವಾರ ನಡೆದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಆಕಸ್ಮಿಕವಾಗಿ ಪಾಲ್ಗೊಂಡೆ. ಕನ್ನಡ ಮತ್ತು ಇಂಗ್ಲಿಷ್ ಪ್ರಕಾಶಕರು ಕಾರ್ಪೊರೇಟ್ ಕಂಪೆನಿಗಳ ಹಾಗೂ ಆಸಕ್ತರ ಸಹಾಯದಿಂದ ನಡೆಸುವ ಈ ಸಾಹಿತ್ಯ ಉತ್ಸವ ಕಳೆದ ಕೆಲ ವರ್ಷಗಳಿಂದ ನಡೆಯುತ್ತ ಬಂದಿದೆ. ಕಾರ್ಪೊರೇಟ್ ಕಂಪೆನಿಗಳು ನಡೆಸುವ ಸಾಹಿತ್ಯ ಉತ್ಸವಕ್ಕೆ ಯಾಕೆ ಹೋಗಬೇಕು ಎಂಬ ಉಪೇಕ್ಷೆ ಯಿಂದ ಹೋಗಿರಲಿಲ್ಲ. ಆದರೆ, ಈ ಬಾರಿ ಹೋದೆ. ಪುರುಷೋತ್ತಮ ಬಿಳಿಮಲೆ ಯವರು ದಿಲ್ಲಿಯಿಂದ ಬರುತ್ತಾರೆ ಎಂದು ತಿಳಿದ ನಂತರ ಅವರನ್ನು ಮಾತಾಡಿಸಿದಂತಾಯಿತು ಎಂದು ಹೋದವನಿಗೆ ಅಲ್ಲಿ ಅವರು ಮಾತ್ರವಲ್ಲ ಅನೇಕ ಅಪರೂಪದ ಮಿತ್ರರು ಸಿಕ್ಕರು. ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಮತ್ತು ಬಿಜಾಪುರದ ಇತಿಹಾಸಕಾರ ಕೃಷ್ಣ ಕೊಲ್ಹಾರ ಕುಲಕರ್ಣಿ ಮೊದಲಾದವರನ್ನು ಬಹಳ ದಿನಗಳ ನಂತರ ಭೇಟಿ ಮಾಡಿದಂತಾಯಿತು. ಇನ್ನು ಕನ್ನಡದ ಮಹತ್ವದ ಲೇಖಕ ಪುರುಷೋತ್ತಮ ಬಿಳಿಮಲೆಯವರ ಜೊತೆ ಇಡೀ ದಿನ ಪಟ್ಟಾಂಗ, ಮಾತು, ಮಾತು. ಕಾಂತಾರ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ. ಸಾಹಿತ್ಯ ಉತ್ಸವಕ್ಕೆ ಹೋಗಿದ್ದು ಸಾರ್ಥಕವಾಯಿತು.

ವೀರಪ್ಪ ಮೊಯ್ಲಿ ಅವರು ತುಂಬಾ ದಿನಗಳ ನಂತರ ಸಿಕ್ಕರು. ರಾಮಕೃಷ್ಣ ಹೆಗಡೆಯವರು ಮುಖ್ಯ ಮಂತ್ರಿಯಾಗಿದ್ದಾಗ ಮೊಯ್ಲಿ ಅವರು ವಿಧಾನ ಸಭೆಯ ಪ್ರತಿಪಕ್ಷ ನಾಯಕರಾಗಿದ್ದರು.ಆಗ ನಾನು ಸದನದ ಕಲಾಪಗಳ ವರದಿಗೆ 'ಸಂಯುಕ್ತ ಕರ್ನಾಟಕ' ಪ್ರತಿನಿಧಿಯಾಗಿ ಹೋಗುತ್ತಿದ್ದೆ. ಅವರು ಸದನದಲ್ಲಿ ಮಾಡುತ್ತಿದ್ದ ವಿದ್ವತ್ಪೂರ್ಣ ಭಾಷಣಗಳನ್ನು ಕೇಳುತ್ತಿದ್ದೆ. ಒಂದು ಸಂದರ್ಭದಲ್ಲಿ ಕೈಗಾ ಅಣುಶಕ್ತಿ ಕೇಂದ್ರದ ಬಗ್ಗೆ ಅವರು ಮಾಡಿದ ಭಾಷಣ ತುಂಬಾ ಇಷ್ಟವಾಯಿತು. ಆಗಾಗ ಕಲಾಪಗಳ ನಡುವೆ ಸದನದ ಮೊಗಸಾಲೆಯಲ್ಲಿ ಅವರ ಜೊತೆ ಮಾತಾಡುತ್ತಿದ್ದೆ.ನಂತರ ಕಂಡಿರಲಿಲ್ಲ. ಸಾಹಿತ್ಯ ಉತ್ಸವಕ್ಕೆ ಅವರು ಬರುತ್ತಾರೆ. ಅವರ ಆತ್ಮಕಥೆ 'ನನ್ನ ಬೊಗಸೆಯ ಆಕಾಶ' ದ ಬಗ್ಗೆ ಅವರೊಂದಿಗೆ ಸಂವಾದ ಮಾಡುತ್ತೇನೆ ಬನ್ನಿ ಎಂದು ಗೆಳೆಯ ಬಿ.ಎಂ.ಹನೀಫ್ ಮುಂಚಿತವಾಗಿ ತಿಳಿಸಿದ್ದರಿಂದ ಆಸಕ್ತಿಯಿಂದ ಹೋಗಿದ್ದೆ. ಆಗ ಎದುರಾದ ಮೊಯ್ಲಿ ಅವರು ನನ್ನನ್ನು ಮರೆತಿರಲಿಲ್ಲ ಗುರುತು ಹಿಡಿದು ಮಾತಾಡಿಸಿದರು. ಸಂವಾದ ಸಂದರ್ಭದಲ್ಲಿ ಕೂಡ ಚುಟುಕಾಗಿ ಅವರು ಚೆನ್ನಾಗಿ ಮಾತಾಡಿದರು. ಭಾರತದ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಮೊಯ್ಲಿ ಅವರು ಜಾತ್ಯತೀತ ನ್ಯಾಯಾಂಗ ವ್ಯವಸ್ಥೆ ಇರುವುದು ಭಾರತದಲ್ಲಿ ಮಾತ್ರ, ಆದರೆ, ಅದೀಗ ಮತೀಯ ಪಂಜರವನ್ನು ಪ್ರವೇಶಿಸುತ್ತಿದೆ ಎಂದು ನೋವಿನಿಂದ ನುಡಿದರು. ಭಾರತದ ಉತ್ತಮ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪುಸ್ತಕ ಬರೆಯುತ್ತಿರುವುದಾಗಿ ತಿಳಿಸಿದರು.

ಗೋರಖ್‌ಪುರ ಆಸ್ಪತ್ರೆಯ ದುರಂತದ ಬಗ್ಗೆ ಡಾ.ಕಫೀಲ್ ಖಾನ್ 'ದಿ ಗೋರಖ್‌ಪುರ ಹಾಸ್ಪಿಟಲ್ ಟ್ರ್ಯಾಜಿಡಿ' ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬಿಡುಗಡೆಯಾದ ಮಾರನೇ ದಿನವೇ ಮಾರುಕಟ್ಟೆಯಿಂದ 4 ಸಾವಿರ ಪ್ರತಿಗಳನ್ನು ವಾಪಸು ಪಡೆಯುವಂತೆ ಮುಖ್ಯ ಮಂತ್ರಿ ಕಚೇರಿಯಿಂದ ಕರೆ ಬಂದಿತೆಂದು ಕಫೀಲ್ ಖಾನ್ ಹೇಳಿದರು.
ಈ ಸಾಹಿತ್ಯ ಉತ್ಸವದಲ್ಲಿ ನನ್ನ ಮಾತ್ರವಲ್ಲ ಬಹುತೇಕ ಜನರ ಗಮನ ಸೆಳೆದವರು ಉತ್ತರ ಪ್ರದೇಶದ ಡಾ.ಕಫೀಲ್ ಖಾನ್. ಇವರಾರೆಂದು ಎಲ್ಲರಿಗೂ ಗೊತ್ತಿದೆ. ಗೋರಖಪುರ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 63 ಹಸುಗೂಸುಗಳು ಅಸುನೀಗಿದವು. ಆ ಸಂದರ್ಭದಲ್ಲಿ ಕೆಲವು ಆಮ್ಲಜನಕ ಸಿಲಿಂಡರ್‌ಗಳನ್ನು ಸ್ವಂತ ಖರ್ಚಿನಲ್ಲಿ ಹೊಂದಿಸಿದ ಡಾ.ಕಫೀಲ್ ಖಾನ್ ಕೆಲವು ಮಕ್ಕಳ ಜೀವ ಉಳಿಸಿದವರು. ಉತ್ತರ ಪ್ರದೇಶದ ಯೋಗಿ ಆದಿತ್ಯ ನಾಥ್ ಸರಕಾರ ಇದನ್ನು ಕಫೀಲ್ ಖಾನ್ ತಲೆಗೆ ಕಟ್ಟಿ ಅವರ ನಿರ್ಲಕ್ಷ ದಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ಬಂಧನಕ್ಕೆ ಗುರಿಪಡಿಸಿತು.

ಗೋರಖ್‌ಪುರ ಯೋಗಿ ಆದಿತ್ಯನಾಥರ ಮತಕ್ಷೇತ್ರ. ಅಲ್ಲಿನ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಗೆ ಯೋಗಿ ಸರಕಾರದ ನಿರ್ಲಕ್ಷ ಕಾರಣ. ಇದನ್ನು ಮುಚ್ಚಿಟ್ಟು ಕಫೀಲ್ ಖಾನ್‌ರನ್ನು ಅಲ್ಲಿನ ಬಿಜೆಪಿ ಸರಕಾರ ಬಂಧಿಸಿತು. ಇದನ್ನೆಲ್ಲ ಸಾಹಿತ್ಯ ಉತ್ಸವದಲ್ಲಿ ಬಿಚ್ಚಿಟ್ಟ ಡಾ.ಕಫೀಲ್ ಖಾನ್ 'ಜೈಲಿನಲ್ಲಿ ನನ್ನನ್ನು ಬೆತ್ತಲೆ ಮಾಡಲಾಗುತ್ತಿತ್ತು. ಪೊಲೀಸರು ರಾಡು, ಬೆಲ್ಟ್ ಮತ್ತು ದೊಣ್ಣೆಯಿಂದ ಥಳಿಸುತ್ತಿದ್ದರು' ಎಂದು ನೋವಿನಿಂದ ಹೇಳಿದರು.
ಜೈಲಿನಲ್ಲಿ ಅನುಭವಿಸಿದ ನರಕ ಯಾತನೆಯ ಬಗ್ಗೆ ನೋವಿನಿಂದ ಮಾತನಾಡಿದ ಕಫೀಲ್ ಖಾನ್, 'ಜೈಲಿನಲ್ಲಿ 4 ದಿನಗಳವರೆಗೆ ಊಟಕ್ಕೆ ಕೊಡುತ್ತಿರಲಿಲ್ಲ. ಕೊಠಡಿಯ ಹೊರಗೆ ಬೆಳೆದ ಹುಲ್ಲನ್ನು ತಿಂದು ಹಸಿವು ಇಂಗಿಸಿಕೊಳ್ಳುತ್ತಿದ್ದೆ' ಎಂದರು.

'ಮೂತ್ರ ವಿಸರ್ಜನೆ ಮಾಡಿದರೆ ನೀರು ಕೊಡುತ್ತಿರಲಿಲ್ಲ. ನನ್ನ ಕೈಯಲ್ಲಿ ಶೌಚಾಲಯ ತೊಳೆಸಿದರು. ನೆಲವನ್ನು ಸ್ವಚ್ಛ ಮಾಡಿಸಿದರು. ಮಾಡಿರದ ತಪ್ಪಿಗಾಗಿ 500 ದಿನ ಯಾತನೆ ಅನುಭವಿಸಿದೆ' ಎಂದು ಕಫೀಲ್ ಖಾನ್ ಹೇಳಿದರು.
'ಇಂಥ ಸಂಕಟದ ಕಾಲದಲ್ಲಿ ಮುಂಬೈನಲ್ಲಿ ಕುಳಿತ ಮಾಧ್ಯಮಗಳ ಮುಖ್ಯಸ್ಥರಿಗೆ ಸತ್ಯ ತಿಳಿದುಕೊಳ್ಳುವ ಆಸಕ್ತಿ ಇರಲಿಲ್ಲ. ಸಾಮಾಜಿಕ ಜಾಲತಾಣ ದಲ್ಲಿ ಬಂದ ಕೋಮುವಾದಿ ಪೂರ್ವಗ್ರಹದ ತಪ್ಪು ಮಾಹಿತಿಗಳನ್ನು ಆಧರಿಸಿ ವರದಿ ಮಾಡಿದರು' ಎಂದು ಡಾ. ಕಫೀಲ್ ಖಾನ್ ನೋವು ವ್ಯಕ್ತಪಡಿಸಿದರು.
ಈ ಸಾಹಿತ್ಯ ಉತ್ಸವದಲ್ಲಿ ಬರ್ಖಾ ದತ್ತ ಮತ್ತು ಶಶಿಕುಮಾರ್ ಅವರ ಜೊತೆಗೆ ಪಾಲ್ಗೊಂಡಿದ್ದ ಪತ್ರಕರ್ತ ಪಿ.ಸಾಯಿನಾಥ್ ಅವರು 'ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ.ಅಂತರ್‌ರಾಷ್ಟ್ರೀಯ ಮಟ್ಟದ ಅಭಿವ್ಯಕ್ತಿ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತ 150 ಸ್ಥಾನದಲ್ಲಿದೆ. ವಾಸ್ತವವಾಗಿ ಅದಕ್ಕಿಂತಲೂ ಕೆಳಮಟ್ಟದಲ್ಲಿದೆ ಎಂದು ಹೇಳಿದರು. ಕೋವಿಡ್‌ನಿಂದ ದೇಶದಲ್ಲಿ 720 ಪತ್ರಕರ್ತ ರು ಸಾವಿಗೀಡಾದರು.ಅವರಲ್ಲಿ ಬಹುತೇಕ ಮಂದಿ ಅರೆಕಾಲಿಕ ವರದಿಗಾರರಾಗಿದ್ದರು ಎಂದು ಸಾಯಿನಾಥ್ ನೋವು ವ್ಯಕ್ತಪಡಿಸಿದರು.

ಸಣ್ಣ ಭಾಷೆಗಳ ಸಬಲೀಕರಣ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಲೇಖಕ ಪುರುಷೋತ್ತಮ ಬಿಳಿಮಲೆ ಅವರು ದೇಶದಲ್ಲಿ ಭಾಷಾ ರಾಜಕಾರಣದ ಹೊಡೆತಕ್ಕೆ ಸಿಕ್ಕು ಸಣ್ಣ ಪುಟ್ಟ ಭಾಷೆಗಳು ವಿನಾಶದ ಅಂಚಿನಲ್ಲಿವೆ.ಹಿಂದಿ ಹೇರಿಕೆಯ ಅತಿರೇಕದ ದುಷ್ಪರಿಣಾಮ ಇದು ಎಂದು ಹೇಳಿದರು. ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ 22 ಭಾಷೆಗಳಲ್ಲಿ 18 ಭಾಷೆಗಳು ಉತ್ತರ ಭಾರತದ ಭಾಷೆಗಳಾಗಿವೆ.ದಕ್ಷಿಣ ಭಾರತದ ನಾಲ್ಕು ಭಾಷೆಗಳಿಗೆ ಮಾತ್ರ ಸ್ಥಾನ ದೊರಕಿದೆ. ಇದೊಂದು ಅಪಾಯಕಾರಿಯಾದ ಪ್ರಾದೇಶಿಕ ಅಸಮತೋಲನ ವಾಗಿದೆ ಎಂದು ಬಿಳಿಮಲೆ ಹೇಳಿದರು.
 2011ರ ಜನಗಣತಿ ಪ್ರಕಾರ ಭಾರತದಲ್ಲಿ 19,569 ಮಾತೃಭಾಷೆಗಳಿವೆ. 99 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದ ಸೇರಲು ಹೋರಾಟ ನಡೆಸಿವೆ. ಸಣ್ಣ ಭಾಷೆಗಳ ಅಭಿವೃದ್ಧಿಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆಸಕ್ತಿ ಹೊಂದಿಲ್ಲ ಎಂದು ಬಿಳಿಮಲೆ ನುಡಿದರು.
ಬ್ಯಾರಿ ಭಾಷೆಯ ಬಗ್ಗೆ ಮಾತನಾಡಿದ ಮುಹಮ್ಮದ್ ಕುಳಾಯಿ, ಬ್ಯಾರಿ ಭಾಷೆಯನ್ನು 25 ಲಕ್ಷ ಮಂದಿ ಮಾತನಾಡುತ್ತಾರೆ. ಬ್ಯಾರಿ ಎಂಬ ಪದ ತುಳುವಿನ ಬ್ಯಾರ ಎಂಬ ಶಬ್ದದಿಂದ ಉದ್ಭವವಾಗಿದೆ, ಇದರಲ್ಲಿ ಕನ್ನಡ, ತಮಿಳು, ಅರೆಬಿಕ್, ಪರ್ಷಿಯನ್, ತುಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಪದಗಳಿವೆ. ತುಳು ಸಮುದಾಯದ ಹೆಚ್ಚಿನ ಆಚರಣೆಗಳು ಬ್ಯಾರಿಗಳಲ್ಲಿ ಇವೆ. ಹೀಗಾಗಿ ಬ್ಯಾರಿಗಳು ಬೇರೆಯಲ್ಲ , ತುಳುವರು ಬೇರೆಯಲ್ಲ ಎಂದು ನುಡಿದರು.

ಅರೆ ಭಾಷೆ ಕನ್ನಡದ ಉಪಭಾಷೆಯಾಗಿದೆ ಎಂದು ಸ್ಮಿತಾ ಅಮೃತ ರಾಜ್‌ಹೇಳಿದರಲ್ಲದೇ ಈ ಭಾಷೆ ಸಾಂಸ್ಕೃತಿಕ ವಾಗಿ ಸಂಪದ್ಭರಿತ ವಾಗಿದೆ ಎಂದರು.
 ಸಾಹಿತ್ಯ ಉತ್ಸವದಲ್ಲಿ ನಾಡಿನ ಹೆಸರಾಂತ ಸಾಹಿತಿ ಯು.ಆರ್.ಅನಂತ ಮೂರ್ತಿ ಅವರ ಕುರಿತ ನೆನಪುಗಳನ್ನು ಹಂಚಿಕೊಂಡ ಅವರ ಪತ್ನಿ ಎಸ್ತರ್ ಅನಂತಮೂರ್ತಿ ಅವರು ಮನೆಯೊಳಗೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿ ರುವಾಗ ಹೊರಗೆ ಪೊಲೀಸರ ಕಾವಲಿತ್ತು. ಇನ್ನೊಂದೆಡೆ ಸಾಹಿತಿಗಳು ಪ್ರತಿಭಟನೆ ನಡೆಸುತ್ತಿದ್ದರು. ಕೊನೆಯ ದಿನಗಳಲ್ಲಿ ಅನಂತಮೂರ್ತಿ ಅವರು ಆಡಿದ ಮಾತೊಂದನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲವರು ಅವರಿಗೆ ಸಾಕಷ್ಟು ಹಿಂಸೆ ಕೊಟ್ಟರು ಎಂದು ನೋವು ವ್ಯಕ್ತಪಡಿಸಿದರು. ಲೇಖಕಿ ವನಮಾಲಾ ವಿಶ್ವನಾಥ ಅವರ ಪ್ರಶ್ನೆಗಳಿಗೆ ಉತ್ತರಿಸುವಾಗ ಅನೇಕ ಬಾರಿ ಭಾವುಕರಾದ ಎಸ್ತರ್ ಅವರು ನಮ್ಮದು ಅಂತರ್ಧರ್ಮೀಯ ಮದುವೆಯಾದರೂ ಹೊಂದಿಕೊಳ್ಳಲು ಕಷ್ಟವಾಗಲಿಲ್ಲ, ಮಕ್ಕಳ ಮೇಲೆ ಯಾವ ಧಾರ್ಮಿಕ ಆಚರಣೆಗಳನ್ನು ಹೇರಲಿಲ್ಲ ಎಂದು ಹೇಳಿದರು. ಈ ಸಾಹಿತ್ಯ ಉತ್ಸವದಲ್ಲಿ ಹೆಚ್ಚು ಆಸಕ್ತಿ ಮೂಡಿಸಿದ ಇನ್ನೊಂದು ಸಂವಾದವೆಂದರೆ ಬಿಜಾಪುರದ ಆದಿಲ್‌ಶಾಹಿ ಸಾಮ್ರಾಜ್ಯದ ಬಗ್ಗೆ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರದು. ಟಿಪ್ಪು ಸುಲ್ತಾನರ ಸುತ್ತಲೂ ಪರ, ವಿರೋಧ ಚರ್ಚೆ ನಡೆಯುತ್ತರುವ ಈ ದಿನಗಳಲ್ಲಿ ಟಿಪ್ಪು ಸಾಮ್ರಾಜ್ಯಕ್ಕಿಂತ ಹಲವಾರು ಪಟ್ಟು ದೊಡ್ಡದಾಗಿದ್ದ ಬಿಜಾಪುರದ ಆದಿಲ್‌ಶಾಹಿ ಆಡಳಿತದ ಚರ್ಚೆಯಾಗು ತ್ತಲೇ ಇಲ್ಲ ಎಂದು ವಿಷಾದಿಸಿದ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಆದಿಲಶಾಹಿ ಆಡಳಿತದ ಜನಪರ ಅಂಶಗಳತ್ತ ಗಮನ ಸೆಳೆದರು.

ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡ ರಾಜರಾಮ ತಲ್ಲೂರು ಅವರು ತಮ್ಮ ಪುಸ್ತಕ 'ಕೋವಿಡ್ ಕರಿಡಬ್ಬಿ' ಕುರಿತು ಮಾತನಾಡುತ್ತ ಕೋವಿಡ್ ಕಾಲದಲ್ಲಿ ಪಿ.ಎಂ.ಕೇರ್ಸ್ ನಿಂದ ಖರೀದಿ ಮಾಡಿದ ವೆಂಟಿಲೇಟರ್‌ಗಳು ಬೈಪಾಪ್ ಯಂತ್ರಗಳಾಗಿದ್ದವು. ಕೋವಿಡ್ ಚಿಕಿತ್ಸೆಗೆ ಮಾತ್ರ ಉಪಯೋಗವಾಗುವ ಇವುಗಳ ಉಪಯುಕ್ತತೆ ಈಗೇನು ಎಂದು ಪ್ರಶ್ನಿಸಿದರು. ದಲಿತ ಸಾಹಿತ್ಯದ ಬಗ್ಗೆ ಮಾತಾಡಿದ ಕವಯಿತ್ರಿ ಮತ್ತು ನಿವೃತ್ತಿ ಪಡೆದ ಐಎಎಸ್ ಅಧಿಕಾರಿ ಪಿ.ಶಿವಕಾಮಿ, 1980 ರಲ್ಲಿ ದಲಿತ ಸಾಹಿತ್ಯಕ್ಕಿದ್ದ ಸ್ವೀಕೃತಿ ಈಗ ಕಡಿಮೆಯಾಗಿದೆ ಎಂದರು.

ಬಿಜಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಹಾರಾಷ್ಟ್ರದ ಮುಂಬೈನಿಂದ ಕೇರಳದ ಕಣ್ಣೂರಿನವರೆಗೆ ಎರಡು ಶತಮಾನಗಳ ಕಾಲ ಆದಿಲ್‌ಶಾಹಿಗಳ ಆಡಳಿತದಲ್ಲಿ ಕೋಮು ಗಲಭೆಗಳು ನಡೆದ ಒಂದೇ ಒಂದು ಉದಾಹರಣೆ ಇಲ್ಲ ಎಂದು ಕೊಲ್ಹಾರ ಕುಲಕರ್ಣಿ ಹೇಳಿದರು. ಹಿಂದೂ-ಮುಸಲ್ಮಾನರು ಸೌಹಾರ್ದದಿಂದ ಇದ್ದರು. ಅವರ ನಡುವೆ ಘರ್ಷಣೆಗಳು ನಡೆಯಲಿಲ್ಲ. ಆದರೆ ಮುಸಲ್ಮಾನರಲ್ಲೇ ಶಿಯಾ ಮತ್ತು ಸುನ್ನಿ ಪಂಗಡಗಳ ನಡುವೆ ಘರ್ಷಣೆ ನಡೆದ ಘಟನೆಗಳು ಚರಿತ್ರೆಯಲ್ಲಿ ದಾಖಲಾಗಿವೆ ಎಂದು ಕುಲಕರ್ಣಿ ಹೇಳಿದರು.
ಹೀಗೆ ಬೆಂಗಳೂರು ಸಾಹಿತ್ಯ ಉತ್ಸವ ವಿಭಿನ್ನ ಧಾರೆಗಳ ಸಂವಾದದ ವೇದಿಕೆಯಾಯಿತು. ತಳ ಸಮುದಾಯಗಳ ಸಂವೇದನೆಗಳಿಗೆ ಅವಕಾಶ ದೊರಕಿತು. ಹೀಗೆ ಎಲ್ಲರನ್ನು ಒಳಗೊಂಡಾಗ ಸಾಹಿತ್ಯ ಕಾರ್ಯಕ್ರಮಗಳು ಅರ್ಥ ಪೂರ್ಣವಾಗುತ್ತವೆ.

Similar News