ಪಾಕ್ ನಲ್ಲಿ ಅವಧಿಪೂರ್ವ ಚುನಾವಣೆಗೆ ಗಡುವು ವಿಧಿಸಿದ ಇಮ್ರಾನ್ ಖಾನ್

Update: 2022-12-12 16:51 GMT

ಇಸ್ಲಮಾಬಾದ್, ಡಿ.12: ಡಿಸೆಂಬರ್ 20ರ ಒಳಗೆ ದೇಶದಲ್ಲಿ ಅವಧಿಪೂರ್ವ ಚುನಾವಣೆ ಘೋಷಿಸಬೇಕು ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan)ಪಾಕ್ ಸರಕಾರಕ್ಕೆ ಗಡುವು ವಿಧಿಸಿದ್ದು, ಇಲ್ಲದಿದ್ದರೆ ತನ್ನ ಪಕ್ಷದ ಆಡಳಿತವಿರುವ ಎರಡು ಪ್ರಾಂತೀಯ ಅಸೆಂಬ್ಲಿಗಳನ್ನು ವಿಸರ್ಜಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಕ್ಷಿಪ್ರ ಚುನಾವಣೆ ನಡೆಸಬೇಕು ಎಂಬ ತನ್ನ ಆಗ್ರಹದ ಬಗ್ಗೆ ಸರಕಾರದ ಜತೆ ಚರ್ಚೆ ನಡೆಸಲು ಇಮ್ರಾನ್ ಖಾನ್ ಮುಂದಿರಿಸಿದ್ದ ಪ್ರಸ್ತಾವನೆಗೆ ಸರಕಾರದಿಂದ ಉತ್ತರ ಬಂದಿಲ್ಲ ಎಂದು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (Tehreek-e-Insaf)ಪಕ್ಷದ ಹಿರಿಯ ಮುಖಂಡ ಫವಾದ್ ಚೌಧರಿ (Fawad Chaudhary)ಟ್ವೀಟ್ ಮಾಡಿದ್ದಾರೆ.

ಎಪ್ರಿಲ್ ನಲ್ಲಿ ಸಂಸತ್ತಿನಲ್ಲಿ ಮಂಡಿಸಿದ್ದ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡು ಇಮ್ರಾನ್ ಸರಕಾರ ಪತನಗೊಂಡಿತ್ತು. ಆ ಬಳಿಕ ಮೈತ್ರಿ ಸರಕಾರ ರಚಿಸಿರುವ ಶಹಬಾಝ್ ಶರೀಫ್ ಸರಕಾರದ ಅವಧಿ ಮುಂದಿನ ವರ್ಷದ ಆಗಸ್ಟ್ಗೆ ಅಂತ್ಯಗೊಳ್ಳಲಿದೆ. ಅವಧಿಗೂ ಮುನ್ನ ಸಾರ್ವತ್ರಿಕ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಶರೀಫ್ (Sharif)ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ 4 ಪ್ರಾಂತಗಳಲ್ಲಿ ಎರಡರಲ್ಲಿ ಇಮ್ರಾನ್ ಪಕ್ಷದ ಸರಕಾರವಿದೆ. ಈ ಪ್ರಾಂತೀಯ ಅಸೆಂಬ್ಲಿಗಳನ್ನು ವಿಸರ್ಜಿಸಿದರೆ ಅಸೆಂಬ್ಲಿಗೆ ಹೊಸದಾಗಿ ಚುನಾವಣೆ ನಡೆಸಬೇಕು. ಸಾಮಾನ್ಯವಾಗಿ ಅಸೆಂಬ್ಲಿ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯ ಜತೆಗೆ ನಡೆಸಲಾಗುತ್ತದೆ. ಆದ್ದರಿಂದ ಇಮ್ರಾನ್ ಖಾನ್ ಈ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Similar News