7 ವರ್ಷಗಳ ಹಿಂದೆ 'ಕೊಲೆಯಾದ' ಪತ್ನಿ ಜೀವಂತ ಪತ್ತೆ: ಮಾಡದ ತಪ್ಪಿಗೆ ವರ್ಷಗಳ ಕಾಲ ಜೈಲಿನಲ್ಲಿ ಕಾಲಕಳೆದ ಪತಿ!

Update: 2022-12-13 14:08 GMT

ದೌಸಾ: ಏಳು ವರ್ಷಗಳ ಹಿಂದೆ ಮೃತಪಟ್ಟಿದ್ದಾಳೆಂದು ಘೋಷಿಸಲಾಗಿದ್ದ ಮಹಿಳೆಯೊಬ್ಬಳನ್ನು ಮೆಹಂದಿಪುರ ಬಾಲಾಜಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆಯ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಇಬ್ಬರು ಜೈಲುವಾಸ ಅನುಭವಿಸುತ್ತಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ ಎಂದು ndtv.com ವರದಿ ಮಾಡಿದೆ.

ಜೀವಂತವಿರುವ ಮಹಿಳೆಯ ಬಗ್ಗೆ ಸಂತ್ರಸ್ತರು ನೀಡಿದ ಸುಳಿವಿನ ಮೇರೆಗೆ ಮೆಹಂದಿಪುರ ಬಾಲಾಜಿ ಠಾಣೆಯ ಪೊಲೀಸರು (Mehandipur Balaji police) ಮಹಿಳೆಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೆಹಂದಿಪುರ ಬಾಲಾಜಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಅಜಿತ್ ಸಿಂಗ್ ಬಡ್ಸೇರಾ, "2015ರಲ್ಲಿ ಆರ್ತಿ ಎಂಬ ಯುವತಿಯನ್ನು ನ್ಯಾಯಾಲಯದಲ್ಲಿ ವಿವಾಹವಾಗಿದ್ದೆ. ವಿವಾಹದ ನಂತರ ಆರ್ತಿಯು ಹಣದೊಂದಿಗೆ ತನ್ನ ಹೆಸರಿನಲ್ಲಿ ಜಮೀನು ಖರೀದಿಸುವಂತೆ ಬೇಡಿಕೆ ಇಟ್ಟಳು. ನಾನು ನನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ಎಂಟು ದಿನಗಳ ನಂತರ ಮನೆ ತೊರೆದು ಕಾಣೆಯಾದಳು. ನಾನು ಆಕೆಗಾಗಿ ಹುಡುಕಿದರೂ ಆಕೆಯನ್ನು ಪತ್ತೆ ಹಚ್ಚಲಾಗಲಿಲ್ಲ ಎಂದು ಸಂತ್ರಸ್ತ ಸೋನು ತಿಳಿಸಿದ್ದಾನೆ" ಎಂದು ಹೇಳಿದ್ದಾರೆ.

ಈ ನಡುವೆ ಉತ್ತರ ಪ್ರದೇಶದ ಪೊಲೀಸರು ಮಥುರಾದ ಮಗೊರ್ರಾ ನಾಲೆಯಲ್ಲಿ ಮೃತದೇಹವೊಂದನ್ನು ಪತ್ತೆ ಹಚ್ಚಿದರು. ಆಕೆಯ ಮರಣೋತ್ತರ ಪರೀಕ್ಷೆ ನಡೆಯದ ಕಾರಣ ಪೊಲೀಸರು ಶವಸಂಸ್ಕಾರ ನೆರವೇರಿಸಿದ್ದರು. ಆರು ತಿಂಗಳ ನಂತರ ನಾಪತ್ತೆಯಾಗಿರುವ ತನ್ನ ಪುತ್ರಿಯ ಕುರಿತು ತನಿಖೆ ನಡೆಸುವಂತೆ ಆರ್ತಿ ತಂದೆ ಪೊಲೀಸರನ್ನು ಸಂಪರ್ಕಿಸಿದಾಗ, ಆತನಿಗೆ ಮೃತ ಮಹಿಳೆಯ ಭಾವಚಿತ್ರ ಹಾಗೂ ಬಟ್ಟೆಗಳನ್ನು ತೋರಿಸಲಾಗಿತ್ತು. ಈ ಸಂದರ್ಭದಲ್ಲಿ ಸೂರಜ್ ಪ್ರಸಾದ್ ಗುಪ್ತ ಆಕೆಯೇ ನನ್ನ ಮಗಳು ಎಂದು ಗುರುತು ಹಿಡಿದಿದ್ದ. ಇದಾದ ನಂತರ ನನ್ನ ಪುತ್ರಿಯ ಸಾವಿಗೆ ಮೆಹಂದಿಪುರ ಬಾಲಾಜಿ ನಿವಾಸಿಗಳಾದ ಸೋನು ಸೈನಿ ಹಾಗೂ ಗೋಪಾಲ್ ಸೈನಿ ಕಾರಣ ಎಂದು ಆರೋಪಿಸಿದ್ದ ಎಂದು ಅವರು ತಿಳಿಸಿದ್ದಾರೆ.

ಸದ್ಯ ಇಬ್ಬರು ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದು, ತಮಗೆ ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಳೆಯ ಪಿಂಚಣಿ ಯೋಜನೆ ಮರುಜಾರಿಗೊಳಿಸುವ ಪ್ರಸ್ತಾಪವಿಲ್ಲ ಎಂದ ಕೇಂದ್ರ

Similar News