ಹಿಂಸಾಚಾರ ಪ್ರಕರಣದ ಆರೋಪಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: CBI ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು

Update: 2022-12-14 06:51 GMT

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭುಮ್ (Birbhum) ಜಿಲ್ಲೆ ಬೋಗ್ಟುಯಿ ಗ್ರಾಮದಲ್ಲಿ ಈ ವರ್ಷ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ, ಸಿಬಿಐ ಕಸ್ಟಡಿಯಲ್ಲಿದ್ದ ಲಲೋನ್ ಶೇಖ್ ಎಂಬಾತ ಸೋಮವಾರ ಆತ್ಮಹತ್ಯೆಗೈದು ಸಾವನ್ನಪ್ಪಿದ್ದಾನೆಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಕೇಂದ್ರೀಯ ತನಿಖಾ ಏಜನ್ಸಿಯ (CBI) ಅಧಿಕಾರಿಗಳ ವಿರುದ್ಧ ರಾಜ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ದಾಖಲಿಸಿರುವ ಎಫ್‍ಐಆರ್‍ನಲ್ಲಿ ಸಿಬಿಐ ನ ಹಿರಿಯ ಅಧಿಕಾರಿಗಳನ್ನು 'ಕೊಲೆ' ಆರೋಪಿಗಳೆಂದು ಗುರುತಿಸಲಾಗಿದೆ. ಈ ಎಫ್‍ಐಆರ್ ಅನ್ನು ಪ್ರಶ್ನಿಸಿ ಕೊಲ್ಕತ್ತಾ ಹೈಕೋರ್ಟ್ ಮೊರೆ ಹೋಗುವುದಾಗಿ ಸಿಬಿಐ ಏಜನ್ಸಿ ಮೂಲಗಳು ತಿಳಿಸಿವೆ.

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬೊಗ್ಟುಯಿ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದರು. ಪ್ರಮುಖ ಆರೋಪಿಯೆಂದು ತಿಳಿಯಲಾದ ಲಲೋನ್ ಶೇಖ್‍ನನ್ನು ಡಿಸೆಂಬರ್ 4 ರಂದು ಜಾರ್ಖಂಡ್‍ನಲ್ಲಿ ಬಂಧಿಸಲಾಗಿತ್ತು.

ಸಿಬಿಐ ತಂಡ ಘಟನೆ ನಡೆದ ಜಿಲ್ಲೆಯಲ್ಲಿ ರಚಿಸಿದ್ದ ತಾತ್ಕಾಲಿಕ ಶಿಬಿರದಲ್ಲಿ ಆತನನ್ನು ಇರಿಸಲಾಗಿತ್ತು. ಆತನ ಸಾವಿನ ಬೆನ್ನಲ್ಲೇ ಆತನ ಕುಟುಂಬ ಸದಸ್ಯರು ಆತ ಕಸ್ಟಡಿಯಲ್ಲಿ ಅನುಭವಿಸಿದ ಹಿಂಸೆಯಿಂದ ಸಾವನ್ನಪ್ಪಿದ್ದಾನೆಂದು ಆರೋಪಿಸಿದ್ದರು. ತನ್ನ ಪತಿಯನ್ನು ಕೊಲ್ಲುವ ಬೆದರಿಕೆಯನ್ನು ಸಿಬಿಐ ಅಧಿಕಾರಿಗಳು ಒಡ್ಡಿದ್ದರು ಹಾಗೂ ಈ ಪ್ರಕರಣದಿಂದ ಮುಕ್ತಗೊಳಿಸಲು ರೂ. 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಲಲೋನ್ ಶೇಖ್ ಪತ್ನಿ ಆರೋಪಿಸಿದ್ದಳು.

ಆರೋಪಗಳು ನಿರಾಧಾರ ಎಂದು ಹೇಳಿರುವ ಸಿಬಿಐ, ಲಲೋನ್ ಶೇಖ್ ಸಾವು ಪ್ರಕರಣದ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮಾಜಿ ಆರ್ ಬಿಐ ಗವರ್ನರ್  ರಘುರಾಮ್ ರಾಜನ್

Similar News