ಜಾರ್ಖಂಡ್: ಕಾಂಗ್ರೆಸ್ ಶಾಸಕಿ ಮಮತಾ ದೇವಿ, 12 ಇತರರಿಗೆ 5 ವರ್ಷ ಜೈಲು ಶಿಕ್ಷೆ

Update: 2022-12-14 10:47 GMT

ರಾಂಚಿ:  ಆರು ವರ್ಷಗಳ ಹಿಂದೆ ರಾಮಘರ್‍ನ ಗೋಲಾ ಎಂಬಲ್ಲಿ ಇನ್‍ಲ್ಯಾಂಡ್ ಪವರ್ ಲಿಮಿಟೆಡ್ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ನಡೆದ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ (2016 firing case) ಸಂಬಂಧಿಸಿದಂತೆ ಇಲ್ಲಿನ ವಿಶೇಷ ಎಂಪಿ-ಎಂಎಲ್ ಎ ನ್ಯಾಯಾಲಯ ಜಾರ್ಖಂಡ್‍ನ ಕಾಂಗ್ರೆಸ್ ಶಾಸಕಿ ಮಮತಾ ದೇವಿಗೆ (Congress MLA Mamta Devi) ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 10,000 ದಂಡ ವಿಧಿಸಿದೆ.ವಿಧಿಸಿದೆ.

ಈ ಪ್ರಕರಣದ ಇನ್ನೊಬ್ಬ ಆರೋಪಿ ರಾಜೀವ್ ಜೈಸ್ವಾಲ್ ವಿರುದ್ಧದ ಆರೋಪವೂ ಸಾಬೀತಾಗಿ ಶಸ್ತ್ರಾಸ್ತ್ರ ಕಾಯಿದೆಯಡಿ ಆತನಿಗೆ ಐದು ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆ ಹಾಗೂ ರೂ 10,000 ದಂಡ ವಿಧಿಸಲಾಗಿದೆ.

ಮಮತಾ ದೇವಿ ಜೊತೆಗೆ ಜೈಲು ಶಿಕ್ಷೆಗೊಳಗಾಗಿರುವ ಇತರರೆಂದರೆ-ಮನೋಜ್ ಕುಜ್ಹರ್, ರಾಜು ಸಾವೊ, ದಿಲ್ದಾರ್ ಹುಸೈನ್, ಆದಿಲ್ ಇನಾಮಿ, ಅಭಿಷೇಕ್ ಸೋನಿ, ರಾಜೀವ್ ಜೈಸ್ವಾಲ್ ಮತ್ತು ಬಾಲೇಶ್ವರ್ ಭಗತ್.

ಸುಪ್ರೀಂ ಕೋರ್ಟಿನ 2013 ತೀರ್ಪಿನಂತೆ ಯಾವುದೇ ಜನಪ್ರತಿನಿಧಿಗೆ 2 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯಾದಲ್ಲಿ ಆತ ಅಥವಾ ಆಕೆ ತಮ್ಮ ಸದಸ್ಯತ್ವ ಕಳೆದುಕೊಳ್ಳುವುದರಿಂದ ಮಮತಾ ದೇವಿ ಕೂಡ ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ.

ಘಟನೆ ಆಗಸ್ಟ್ 2016 ರಲ್ಲಿ ನಡೆದಿತ್ತು. ಮಮತಾ ದೇವಿ ನೇತೃತ್ವದಲ್ಲಿ ಗ್ರಾಮಸ್ಥರು ಗೋಲಾದಲ್ಲಿ ಇನ್‍ಲ್ಯಾಂಡ್ ಪವರ್ ಲಿಮಿಟೆಡ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಾಳಿದ್ದರಿಂದ ಪೊಲೀಸರು ಗೊಲೀಬಾರ್ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟು ಹಲವು ಪೊಲೀಸ್ ಅಧಿಕಾರಿಗಳ ಸಹಿತ ಬಹಳಷ್ಟು ಜನರು ಗಾಯಗೊಂಡಿದ್ದರು.

ಈ ಘಟನೆ ನಂತರ ಮಮತಾ ದೇವಿ, ಜೈಸ್ವಾಲ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಮಮತಾ ದೇವಿ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕಿಯಾಗಿ  ಆಯ್ಕೆಯಾದವರು. ಆಕೆಯಂತೆಯೇ ಈ ಹಿಂದೆ ಶಾಸಕ ಸ್ಥಾನವನ್ನು ಕಾಂಗ್ರೆಸ್‍ನ ಮಂಡರ್ ಶಾಸಕ ಬಂಧು ಟಿರ್ಕಿ ಕಳೆದುಕೊಂಡಿದ್ದರು. ಅಕ್ರಮ ಆಸ್ತಿ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಅವರ್ನು ದೋಷಿಯೆಂದು ಘೋಷಿಸಿತ್ತು.

ಇದನ್ನೂ ಓದಿ: ಶಾಲಾ ಬಾಲಕಿಯ ಮೇಲೆ ಆ್ಯಸಿಡ್ ದಾಳಿ: ಸಂತ್ರಸ್ತೆ ಗಂಭೀರ

Similar News