ಪ್ರಥಮ ದರ್ಜೆ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್

Update: 2022-12-14 16:32 GMT

ಮುಂಬೈ, ಡಿ.14: ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ತನ್ನ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ಈ ಬಾರಿ ರಣಜಿಯಲ್ಲಿ ಗೋವಾವನ್ನು ಪ್ರತಿನಿಧಿಸುತ್ತಿರುವ 23ರ ಹರೆಯದ ಅರ್ಜುನ್ ರಾಜಸ್ಥಾನ ವಿರುದ್ಧ ಗೋವಾದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದ 2ನೇ ದಿನದಾಟದಲ್ಲಿ 195 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 113 ರನ್ ಗಳಿಸಿದ್ದಾರೆ. 

ಸುಯಶ್ ಪ್ರಭು ದೇಸಾಯಿ(ಔಟಾಗದೆ 172 ರನ್)ಅವರೊಂದಿಗೆ ಆರನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 212 ರನ್ ಸೇರಿಸಿರುವ ತೆಂಡುಲ್ಕರ್ ಗೋವಾ ತಂಡ 5 ವಿಕೆಟ್ ನಷ್ಟಕ್ಕೆ 413 ರನ್ ಗಳಿಸಲು ನೆರವಾಗಿದ್ದಾರೆ.

ಸರಿಸುಮಾರು 34 ವರ್ಷಗಳ ಹಿಂದೆ 1988ರ ಡಿಸೆಂಬರ್ 11ರಂದು ತನ್ನ 15ನೆ ವಯಸ್ಸಿನಲ್ಲಿ ತೆಂಡುಲ್ಕರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಈ ಸಾಧನೆ ಮಾಡಿದ ಭಾರತದ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದರು. ವಾಂಖೆಡೆ ಸ್ಟೇಡಿಯಮ್‌ನಲ್ಲಿ ಗುಜರಾತ್ ವಿರುದ್ಧ ಬಾಂಬೆ ಪರ ಔಟಾಗದೆ 100 ರನ್ ಗಳಿಸಿದ್ದರು.

ಮುಂಬೈನಲ್ಲಿ ಹೆಚ್ಚು ಪಂದ್ಯವನ್ನಾಡಲು ಅವಕಾಶ ಸಿಗದ ಕಾರಣ ಅರ್ಜುನ್ ತೆಂಡುಲ್ಕರ್ ಈ ಋತುವಿನಿಂದ ಗೋವಾ ಪರ ಆಡುತ್ತಿದ್ದಾರೆ.

Similar News