ಕರಾವಳಿ ಕಾವಲು ಪಡೆಯ ವಿಶಿಷ್ಟ ಪರಿಕಲ್ಪನೆ: ಸಮುದ್ರ ಸ್ವಚ್ಛತೆಗಾಗಿ ಬೀಚ್ ದತ್ತು ಪಡೆಯುವ ಕಾರ್ಯಕ್ರಮ

Update: 2022-12-14 15:49 GMT

ಮಲ್ಪೆ, ಡಿ.14: ಸಮುದ್ರ ತೀರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಆಸಕ್ತ ಸಂಘ-ಸಂಸ್ಥೆಗಳು ಕರಾವಳಿ ಕಾವಲು ಪಡೆಯ ಮೂಲಕ ಯಾವುದೇ ಬೀಚ್‌ಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಎಲ್ಲ ಬೀಚ್‌ಗಳ ಸಮೀಪದ ಗ್ರಾಮಗಳು ಅಥವಾ ಇತರ ಭಾಗದ ಸಂಸ್ಥೆಗಳೂ ಇದರಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಒದಗಿಸಲಾಗಿದ್ದು, ದತ್ತು ಪಡೆದು ಕೊಂಡ ಬೀಚ್ ಸ್ವಚ್ಛತೆಯನ್ನು ನಿರ್ದಿಷ್ಟ ಕಾಲಮಿತಿಯವರೆಗೆ ನೋಡಿಕೊಳ್ಳಬೇಕಾಗುತ್ತದೆ.

ಕಡಲ ತೀರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಡಲತೀರದ ಸ್ವಚ್ಛತೆ ಕಾರ್ಯಕ್ರಮವನ್ನು ಕರಾವಳಿ ಕಾವಲು ಪೊಲೀಸ್ ಪಡೆಯು ಆಗಸ್ಟ್‌ನಿಂದ ಆರಂಭಿಸಿದೆ. ದ.ಕ. ಜಿಲ್ಲೆಯಿಂದ ಕಾರವಾರವರೆಗಿನ ಸುಮಾರು 324 ಕಿ.ಮೀ. ಉದ್ದದ ಕಡಲತೀರದ ಸ್ವಚ್ಛತೆ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆ  ನಡೆಯುತ್ತಿದೆ. ಈ ಬಗ್ಗೆ ಡಿ.27ರಿಂದ 31ರವರೆಗೆ ನಿರಂತರವಾಗಿ ಕಾರ್ಯಕ್ರಮ ಗಳನ್ನು ನಡೆಸಲು ಉದ್ದೇಶಿಸಲಾಗಿದೆ.

ಡಿ.27ರಿಂದ ಆರಂಭಗೊಳ್ಳಲಿರುವ ನಿರಂತರ ಬೀಚ್ ಸ್ವಚ್ಛತೆ ಕಾರ್ಯಕ್ರಮ ಪ್ರತಿದಿನ ಬೆಳಗ್ಗೆ 7ರಿಂದ ಬೆಳಗ್ಗೆ 10ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಡಿ.31ರಂದು ಕೊನೆಯ ದಿನ ಬೆಳಗ್ಗಿನಿಂದ ತಡರಾತ್ರಿವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಯಲಿವೆ. ಮರಳು ಕಲಾಕೃತಿ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಸಮುದ್ರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಾಗರದಲ್ಲಿನ ಕಸ ಮತ್ತು ಪ್ಲಾಸ್ಟಿಕ್ ಅನ್ನು ಕಡಿಮೆ ಮಾಡಲು ಕೊಡುಗೆ ನೀಡುವುದು ಬೀಚ್ ಸ್ವಚ್ಛತೆಯ ಗುರಿಯಾಗಿದೆ. ಸಮುದ್ರ ತೀರದಲ್ಲಿ ಶೇಖರಣೆ ಯಾಗುವ ಪ್ಲಾಸ್ಟಿಕ್‌ಗಳು ಕ್ರಮೇಣ ಪುಡಿಯಾಗಿ ಮೀನುಗಳಿಗೆ ಆಹಾರವಾಗುತ್ತಿದೆ. ಅವುಗಳನ್ನು ಸೇವಿಸುವ ಮನುಷ್ಯರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಕರಾವಳಿ ಕಾವಲು ಪೊಲೀಸ್ ಈ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದೆ.

ಸಮುದ್ರ ತೀರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಪ್ರತಿ ತಿಂಗಳು ಇಲಾಖೆ ವತಿಯಿಂದ ಹಾಗೂ ಇತರ ಸಂಘ-ಸಂಸ್ಥೆಗಳಿಂದ ಬೀಚ್ ಶುಚಿತ್ವ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಜತೆಗೆ ಸಾರ್ವಜನಿಕರು ಕೂಡ ಕೈಜೋಡಿಸಲಿದ್ದಾರೆ. ಸಾರ್ವಜನಿಕರು ಸ್ವಯಂ ಆಸಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ತಿಳಿಸಿದ್ದಾರೆ.

Similar News