ಬಂಗಾಳ ಬಿಜೆಪಿ ನಾಯಕ ಆಯೋಜಿಸಿದ್ದ ಸಮಾರಂಭದಲ್ಲಿ ನೂಕುನುಗ್ಗಲು: ಕಾಲ್ತುಳಿತಕ್ಕೆ ಮೂವರು ಬಲಿ

Update: 2022-12-15 06:14 GMT

ಕೋಲ್ಕತ್ತಾ: ಪಶ್ಚಿಮ ಬಂಗಾಳ (West Bengal) ಜಿಲ್ಲೆಯ ಪಶ್ಚಿಮ ಬರ್ದ್ವಾನ್ ಜಿಲ್ಲೆಯ ಅಸನೋಲ್‌ನಲ್ಲಿ ಬಿಜೆಪಿ (BJP) ನಾಯಕರೊಬ್ಬರು ಆಯೋಜಿಸಿದ್ದ ಕಂಬಳಿ ವಿತರಣೆ ಕಾರ್ಯಕ್ರಮದಲ್ಲಿ ನೂಕುನುಗ್ಗಲುಂಟಾಗಿ ಓರ್ವ ಬಾಲಕಿ ಸೇರಿದಂತೆ ಮೂರು ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.

ಅಸನೋಲ್ ಮುನಿಸಿಪಲ್ ಕಾರ್ಪೊರೇಷನ್‌ನ ವಾರ್ಡ್ ನಂ. 27ರ ಸದಸ್ಯನಾದ ಚೈತಾಲಿ ತಿವಾರಿ ಧಾರ್ಮಿಕ ಸಂಸ್ಥೆ ಶಿವ್ ಚರ್ಚಾ ವತಿಯಿಂದ ಜನರಿಗೆ ಕಂಬಳಿ ಹಂಚಿಕೆ ಮಾಡುವ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಹಾಗೂ ಬಿಜೆಪಿಯ ಮತ್ತೊಬ್ಬ ನಾಯಕ ಜಿತೇಂದ್ರ ತಿವಾರಿ ಭಾಗವಹಿಸಿದ್ದರು. ಕಾರ್ಯಕ್ರಮದಿಂದ ಅವರಿಬ್ಬರೂ ತೆರಳಿದ ಬೆನ್ನಿಗೇ ಜನರಿಂದ ಕಂಬಳಿ ಪಡೆಯಲು ನೂಕುನುಗ್ಗಲುಂಟಾಗಿ, ಕಾಲ್ತುಳಿತದಲ್ಲಿ ಮೂರು ಮಂದಿ ಸಾವಿಗೀಡಾಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ 5000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಪಡೆಯಲಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲ್ತುಳಿತದಲ್ಲಿ ಸಾವಿಗೀಡಾದವರನ್ನು ಚಂದಮನಿ ದೇಬಿ (55), ಝಲಿ ಬೌರಿ (60) ಹಾಗೂ ಪ್ರೀತಿ ಸಿಂಗ್ (12) ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಜಿತೇಂದ್ರ ತಿವಾರಿ, "ಇದು ಅತ್ಯಂತ ದುರದೃಷ್ಟಕರ ಘಟನೆ. ನಾವು ನಮ್ಮ ಕುಟುಂಬದ ಸದಸ್ಯರಂತಿದ್ದ ಮೂರು ಮಂದಿಯನ್ನು ಕಳೆದುಕೊಂಡಿದ್ದೇವೆ. ನಾವು ಧಾರ್ಮಿಕ ಕಾರ್ಯಕ್ರಮದಲ್ಲಿ ಕಂಬಳಿ ಹಂಚಿಕೆ ಮಾಡಲು ಅನುಮತಿಗಾಗಿ ಡಿಸೆಂಬರ್ 3ರಂದು ಪೊಲೀಸರಿಗೆ ಮನವಿ ಸಲ್ಲಿಸಿದ್ದೆವು‌. ಆದರೆ, ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದರು. ಹೀಗಿದ್ದೂ, ಇದು ದೋಷಾರೋಪ ರಾಜಕೀಯ ಮಾಡುವ ಸಮಯವಲ್ಲ‌. ನಾವಿಂದು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರೊಂದಿಗೆ ನಿಲ್ಲಬೇಕಿದೆ" ಎಂದು ಹೇಳಿದ್ದಾರೆ.

ಆದರೆ, ಪೊಲೀಸರು ಅನುಮತಿ ನಿರಾಕರಿಸಿದರೂ ಕಾರ್ಯಕ್ರಮ ಆಯೋಜಿಸಿದ್ದ ಬಿಜೆಪಿ ಮೇಲೆ ಆಡಳಿತಾರೂಢ TMC ವಾಗ್ದಾಳಿ ನಡೆಸಿದೆ. "ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ನಾಯಕರು ಹಾಗೂ ಕಾರ್ಯಕ್ರಮ ಸಂಘಟಕರು ಈ ದುರಂತದ ಹೊಣೆಯನ್ನು ಹೊರಬೇಕು. ಅವರು ಈ ವಿಷಯದಿಂದ ಕೈ ತೊಳೆದುಕೊಳ್ಳಲು ಸಾಧ್ಯವಿಲ್ಲ. ಅನುಮತಿ ನಿರಾಕರಿಸಿದರೂ ಅವರೇಕೆ ಕಾರ್ಯಕ್ರಮ ಆಯೋಜಿಸಿದರು?" ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ.

Similar News