ಭಾರತದ ಸಂಸತ್ತಿನಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವಿಲ್ಲವೇ?: ಮಲ್ಲಿಕಾರ್ಜುನ ಖರ್ಗೆ

Update: 2022-12-15 06:58 GMT

ಹೊಸದಿಲ್ಲಿ: ಕಳೆದ ವಾರ ಅರುಣಾಚಲ ಪ್ರದೇಶದಲ್ಲಿ ಭಾರತ ಹಾಗೂ  ಚೀನಾ ಸೈನಿಕರ ನಡುವೆ ನಡೆದ ಗಡಿ ಘರ್ಷಣೆ ಕುರಿತು ಚರ್ಚೆ ನಡೆಸಬೇಕು ಎಂಬ ವಿಪಕ್ಷಗಳ ಬೇಡಿಕೆಗೆ ಸಂಸತ್ತಿನಲ್ಲಿ ಉಂಟಾದ ಘರ್ಷಣೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸರಕಾರದ "ಕೆಂಪು ಕಣ್ಣು" ಚೀನಾದ ಕನ್ನಡಕದಿಂದ ನೋಡುತ್ತಿದೆ ಎಂದು ಹೇಳಿದ್ದಾರೆ.

ಈ ವಾರ ಸಂಸತ್ತಿನಲ್ಲಿ ಹಲವು ಅಡೆತಡೆಗಳು ಉಂಟಾಗಿದ್ದು, ಉಭಯ ಸದನಗಳು "ಭಾರತ-ಚೀನಾ ಗಡಿ ಪರಿಸ್ಥಿತಿ" ಕುರಿತು ಚರ್ಚೆಗೆ ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿವೆ.

ಮೋದಿ ಸರಕಾರದ ಕೆಂಪು ಕಣ್ಣನ್ನು ಚೀನಾದ ಕನ್ನಡಕವು ಮುಚ್ಚಿರುವಂತೆ ಕಾಣುತ್ತಿದೆ. ಭಾರತದ ಸಂಸತ್ತಿನಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವಿಲ್ಲವೇ?'' ಎಂದು ಮಲ್ಲಿಕಾರ್ಜುನ ಖರ್ಗೆ Mallikarjun Kharge ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ಸ್ಪೀಕರ್ ಅವರು ಚರ್ಚೆಗೆ ಮನವಿಯನ್ನು ತಿರಸ್ಕರಿಸಿದ ನಂತರ ಬುಧವಾರ ಲೋಕಸಭೆಯಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿದರು.

ಕಾಂಗ್ರೆಸ್, ಎನ್‌ಸಿಪಿ ಮತ್ತು ಇತರ ಹಲವು ಪಕ್ಷಗಳು ಭಾರತ-ಚೀನಾ ಗಡಿ ಘರ್ಷಣೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿವೆ.ಆದರೆ ಇದುವರೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಮೀರಿ ತೊಡಗಿಸಿಕೊಳ್ಳಲು ಸರಕಾರ ನಿರಾಕರಿಸಿದೆ.

Similar News