ವಿಶ್ವಸಂಸ್ಥೆ ಮಹಿಳೆಯರ ಹಕ್ಕಿನ ಸಮಿತಿಯಿಂದ ಇರಾನ್ ವಜಾ: ಮತದಾನದಿಂದ ದೂರವುಳಿದ ಭಾರತ

Update: 2022-12-15 18:39 GMT

ವಿಶ್ವಸಂಸ್ಥೆ, ಡಿ.15: ಮಹಿಳೆಯರ ಹಕ್ಕುಗಳಿಗಾಗಿನ ವಿಶ್ವಸಂಸ್ಥೆಯ ಆಯೋಗ(ಸಿಎಸ್ಡಬ್ಲೂ)ನಿಂದ ಇರಾನ್ ಅನ್ನು ಉಚ್ಛಾಟಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ 54 ಸದಸ್ಯಬಲದ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಬಹುಮತದಿಂದ ಅಂಗೀಕರಿಸಿದೆ.

29 ದೇಶಗಳು ನಿರ್ಣಯದ ಪರ ಮತ ಚಲಾಯಿಸಿದರೆ ಚೀನಾ, ರಶ್ಯಾ ಸಹಿತ 8 ದೇಶಗಳು ವಿರೋಧವಾಗಿ ಮತ ಚಲಾಯಿಸಿವೆ. ಭಾರತ, ಬಾಂಗ್ಲಾ ಸಹಿತ 16 ದೇಶಗಳು ಮತದಾನದಿಂದ ದೂರ ಉಳಿದಿವೆ. 2022ರಲ್ಲಿ ಈ ಸಮಿತಿ ಸದಸ್ಯನಾಗಿ ಆಯ್ಕೆಯಾಗಿದ್ದ ಇರಾನ್ನ  ಸದಸ್ಯತ್ವದ ಅವಧಿ 2026ಕ್ಕೆ ಅಂತ್ಯವಾಗಬೇಕಿತ್ತು.  ಇರಾನ್ನಲ್ಲಿ ಸೆಪ್ಟಂಬರ್ನಿಂದ  ಭುಗಿಲೆದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ನಡೆಸಿದ ಕಾರ್ಯಾಚರಣೆ ಅತ್ಯಂತ ಕಳವಳಕಾರಿಯಾಗಿದೆ ಎಂದು ನಿರ್ಣಯದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಪ್ರಚಾರಕ್ಕೆ ಮೀಸಲಾಗಿರುವ ಪ್ರಮುಖ ಜಾಗತಿಕ ಅಂತರ್ಸರಕಾರಿ ಆಯೋಗದಿಂದ ಇರಾನ್ ಅನ್ನು ಹೊರಗಿಡುವ ನಿರ್ಣಯವನ್ನು  ಡಿಸೆಂಬರ್ 14ರಂದು ಅಮೆರಿಕ ವಿಶ್ವಸಂಸ್ಥೆಯಲ್ಲಿ ಮಂಡಿಸಿತ್ತು.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ನಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದಬ್ಬಾಳಿಕೆ ನಿರಂತರ ಮುಂದುವರಿದಿದೆ.  ಮಹಿಳೆಯರು ಮತ್ತು ಬಾಲಕಿಯರ ಮಾನವ ಹಕ್ಕುಗಳಿಗೆ ವಿರುದ್ಧವಾದ ನೀತಿಗಳನ್ನು ಹೇರುವ ಮೂಲಕ ಇರಾನ್ ನಿರಂತರವಾಗಿ ದುರ್ಬಲಗೊಳಿಸಿದೆ. ಬಲಪ್ರಯೋಗದ ಮೂಲಕ  ಅಭಿವ್ಯಕ್ತಿ ಮತ್ತು ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕು ಸೇರಿದಂತೆ ಮಹಿಳೆಯರು ಮತ್ತು ಬಾಲಕಿಯರ ಮಾನವ ಹಕ್ಕುಗಳನ್ನು ಹತ್ತಿಕ್ಕಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಬಳಸಿದ ಬಲಪ್ರಯೋಗ ಮಹಿಳೆಯರು ಹಾಗೂ ಹುಡುಗಿಯರ ಸಹಿತ ಹಲವರ ಸಾವಿಗೆ ಕಾರಣವಾಗಿದೆ ಎಂದು ನಿರ್ಣಯ ಪ್ರತಿಪಾದಿಸಿದೆ.

ಇರಾನ್ ಅನ್ನು ವಿಶ್ವಸಂಸ್ಥೆಯ ಪ್ರಮುಖ ಸಮಿತಿಯಿಂದ ಹೊರಗಿಡುವ ನಿರ್ಣಯವು ಇರಾನ್ನ ಧೀರ ಜನತೆ ಮತ್ತು ವಿಶೇಷವಾಗಿ ಮಹಿಳೆಯರು ಹಾಗೂ ಬಾಲಕಿಯರಿಗೆ  ವಿಶ್ವದಾದ್ಯಂತದ ಬೆಂಬಲದ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಪ್ರತಿಕ್ರಿಯಿಸಿದ್ದಾರೆ.

ಆದರೆ, ಈ ಕ್ರಮದ ಹಿಂದೆ ಅಮೆರಿಕದ ಸ್ವಾರ್ಥ ಮತ್ತು ಸ್ವಹಿತಾಸಕ್ತಿ ಅಡಗಿದೆ ಎಂದು ಇರಾನ್ನ ಮಾನವ ಹಕ್ಕುಗಳ ಉನ್ನತ ಸಮಿತಿಯ ಮುಖ್ಯಸ್ಥರು ಟೀಕಿಸಿದ್ದಾರೆ. `ಅಮೆರಿಕ ಪ್ರೇರಿತ ಈ ನಿರ್ಣಯಕ್ಕೆ ಕಾನೂನಿನ ಸಮರ್ಥನೆಯಿಲ್ಲ. ಅಮೆರಿಕದ ಈ ಏಕಪಕ್ಷೀಯ ಕೃತ್ಯವು ಏಕಪಕ್ಷೀಯ ರಾಜಕೀಯ ಬೇಡಿಕೆಗಳನ್ನು ಹೇರುವ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಚುನಾವಣಾ ಕಾರ್ಯವಿಧಾನಗಳನ್ನು ನಿರ್ಲಕ್ಷಿಸುವ ಪ್ರಯತ್ನವಾಗಿದೆ. ಆಯೋಗದ ಕ್ರಮಬದ್ಧ ಸದಸ್ಯರನ್ನು ವಜಾಗೊಳಿಸುವುದು ವಿಶ್ವಸಂಸ್ಥೆಗೆ ಅಪಖ್ಯಾತಿ ತರುತ್ತದೆ ಮತ್ತು ಅಂತರಾಷ್ಟ್ರೀಯ ಏಕಪಕ್ಷೀಯ ಕಾರ್ಯವಿಧಾನಕ್ಕೆ ಮೇಲ್ಪಂಕ್ತಿ ಹಾಕಿಕೊಡುತ್ತದೆ'  ಎಂದು ಇರಾನ್ನ ವಿದೇಶಾಂಗ ಇಲಾಖೆಯ ವಕ್ತಾರ ನಾಸೆರ್ ಕನ್ನಾನಿ ಹೇಳಿದ್ದಾರೆ.

Similar News