ಹಲವು ಪತ್ರಕರ್ತರ ಟ್ವಿಟರ್ ಖಾತೆ ಅಮಾನತು: ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-12-16 06:30 GMT

ಕ್ಯಾಲಿಫೋರ್ನಿಯಾ: ಟ್ವಿಟರ್ (Twitter) ಇಂಕ್ ಹಲವಾರು ಪತ್ರಕರ್ತರ ಟ್ವಿಟರ್ ಖಾತೆಗಳನ್ನು ಅಮಾನತುಗೊಳಿಸಿದ್ದು, ಈ ಪೈಕಿ ನ್ಯೂಯಾರ್ಕ್ ಟೈಮ್ಸ್ ಹಾಗೂ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳ ತಲಾ ಓರ್ವ ಪತ್ರಕರ್ತರ ಖಾತೆಗಳೂ ಸೇರಿವೆ ಎಂದು ndtv.com ವರದಿ ಮಾಡಿದೆ.

ಆ ಖಾತೆಗಳನ್ನು ಏಕೆ ಅಮಾನತುಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಖಾತೆಗಳ ಅಮಾನತಿಗೊಳಗಾಗಿರುವ ಪತ್ರಕರ್ತರೆಲ್ಲ ಟ್ವಿಟರ್‌ನ ನೂತನ ಮಾಲಕ ಎಲಾನ್ ಮಸ್ಕ್ ಇತ್ತೀಚೆಗೆ ಟ್ವಿಟರ್‌ನಲ್ಲಿ ತಂದ ಬದಲಾವಣೆಯ ಕುರಿತು ತಮ್ಮ ಟ್ವಿಟರ್ ಖಾತೆಗಳಲ್ಲಿ ಟೀಕೆ ಮಾಡಿದ್ದರು ಎಂದು Reuters ವರದಿ ಮಾಡಿದೆ.

ಖಾತೆ ಅಮಾನತು ಕುರಿತ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಸ್ಕ್, "ಬೇರೆಲ್ಲರಿಗೂ ಅನ್ವಯವಾಗುವ 'ಡಾಕ್ಸಿಂಗ್' ನಿಯಮಗಳೇ ಪತ್ರಕರ್ತರಿಗೂ ಅನ್ವಯವಾಗುತ್ತದೆ" ಎಂದು ಟ್ವಿಟರ್‌ನ ಖಾಸಗಿ ಮಾಹಿತಿ ಹಂಚಿಕೆ ನಿಷೇಧಿಸುವ ಡಾಕ್ಸಿಂಗ್ ನಿಯಮವನ್ನು ಉಲ್ಲೇಖಿಸಿ ಹೇಳಿದ್ದಾರೆ.

"ದಿನಪೂರ್ತಿ ನನ್ನನ್ನು ಟೀಕಿಸುವುದು ಒಟ್ಟಾರೆ ಸಮ್ಮತ. ಆದರೆ, ವಾಸ ಸ್ಥಳದ ನೈಜ ಸಮಯವನ್ನು ಬಹಿರಂಗಪಡಿಸಿ, ನನ್ನ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸುವುದು ಸಮ್ಮತವಲ್ಲ" ಎಂದೂ ಹೇಳಿದ್ದಾರೆ.

ಈ ಕುರಿತು ಕೂಡಲೇ ಪ್ರತಿಕ್ರಿಯಿಸುವಂತೆ ಮಾಡಿದ ಮನವಿಗೆ ಟ್ವಿಟರ್ ಸ್ಪಂದಿಸಿಲ್ಲ.

ತಾನು ಮುಕ್ತ ವಾಕ್ ಸ್ವಾತಂತ್ರ್ಯದ ಪರವಿದ್ದು, ಖಾತೆಗಳನ್ನು ಅಮಾನತುಗೊಳಿಸದಿರಲು ಬದ್ಧನಾಗಿದ್ದೇನೆ ಎಂದು ಕಳೆದ ತಿಂಗಳಷ್ಟೇ ಮಸ್ಕ್ ಹೇಳಿಕೆ ನೀಡಿದ್ದರು. ಇದರ ಬೆನ್ನಿಗೇ ಮಸ್ಕ್ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್ ವಿಮಾನದ ನೈಜ ಸಮಯವನ್ನು ಖಾತೆಯೊಂದರಲ್ಲಿ ಹಂಚಿಕೊಂಡಿದ್ದರಿಂದ ಟ್ವಿಟರ್ ಆ ಖಾತೆಯನ್ನು ಅಮಾನತುಗೊಳಿಸಿದೆ.

ನ್ಯೂಯಾರ್ಕ್ ಟೈಮ್ಸ್ ವರದಿಗಾರ ರಯಾನ್ (@rmac18), ವಾಷಿಂಗ್ಟನ್ ಪೋಸ್ಟ್ ವರದಿಗಾರ ಡ್ರ್ಯೂ ಹಾರ್ವೆಲ್ (@drewharwell), ಸಿಎನ್‌ಎನ್ ವರದಿಗಾರ ಡೋನೀ ಒ'ಸುಲಿವಿಯನ್ (@donie) ಹಾಗೂ ಮಾಷಬಲ್ ವರದಿಗಾರ ಮ್ಯಾಟಿ ಬೈಂಡರ್ (@MattBinder) ಟ್ವಿಟರ್ ಖಾತೆಗಳು ಅಮಾನತುಗೊಂಡಿವೆ. ಇದರೊಂದಿಗೆ ಅಮೆರಿಕ ವಿದೇಶಾಂಗ ನೀತಿ ಹಾಗೂ ರಾಜಕೀಯದ ಕುರಿತು ವರದಿ ಮಾಡುವ ಸ್ವತಂತ್ರ ಪತ್ರಕರ್ತ ಆ್ಯರನ್ ರೂಪರ್ (@atrupar) ಖಾತೆಯನ್ನೂ ಅಮಾನತುಗೊಳಿಸಲಾಗಿದೆ.

Similar News