×
Ad

ಕೊರಗ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಸರಕಾರಕ್ಕೆ ಮನವಿ

Update: 2022-12-16 17:29 IST
ಕುಂದಾಪುರ, ಡಿ.16: ಕುಂದಾಪುರ ತಾಲೂಕು ವ್ಯಾಪ್ತಿಯ ಕೊರಗ ಸಮು ದಾಯದ ಕುಟುಂಬಗಳಿಗೆ ಸರಕಾರಿ ಭೂಮಿಗೆ ಹಕ್ಕು ಪತ್ರ ನೀಡುವಂತೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ನಿಯೋಗ ಶುಕ್ರವಾರ ಕುಂದಾಪುರ ತಹಶೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು. ಕೊರಗ ಬುಡಕಟ್ಟು ಸಮುದಾಯವು ಆದಿಮ ಅತ್ಯಂತ ಹಿಂದುಳಿದ ಬುಡಕಟ್ಟು ಪಂಗಡವಾಗಿದ್ದು, ಕೇಂದ್ರ ಸರಕಾರವು 1986ರಲ್ಲಿ ವಿಶೇಷವಾದ ನೋಟಿಫಿಕೇಶನ್, ಮಾಡಿ ಕರ್ನಾಟಕ ರಾಜ್ಯದಲ್ಲಿ ನಿರ್ದಿಷ್ಟ, ದುರ್ಬಲ, ಅಸಹಾಯಕ ಅಂಚಿಗೆ ತಳ್ಳಲ್ಪಟ್ಟ ಬುಡಕಟ್ಟು ಸಮುದಾಯ ಎಂದು ಘೋಷಿಸಿದೆ. ಕೊರಗ ಸಮುದಾಯದ ವಿಶೇಷ ಅಧ್ಯಯನ ಮಾಡಿರುವ ಡಾ.ಮಹಮ್ಮದ್ ಫೀರ್ ವರದಿಯಲ್ಲಿಯೂ ಕೊರಗರ ಇಂದಿನ ಪರಿಸ್ಥಿತಿಗೆ ಭೂಮಿಹೊಂದದೇ ಇರುವುದು ಮತ್ತು ಕೃಷಿಕರಾಗಿರದೆ ಇರುವುದೇ ಕಾರಣವಾಗಿದೆ ಎಂದು ತಿಳಿಸಿದೆ. ಆದ್ದರಿಂದ ಕೊರಗ ಸಮುದಾಯದ ಪ್ರತಿಯೊಂದು ಕುಟುಂಬಕ್ಕೂ ತಲಾ 2.5 ಎಕರೆ ಭೂಮಿ ನೀಡಿ ಅವರುಗಳು ಮಾದರಿ ಕೃಷಿಕರಾಗುವಂತೆ ಪುನರ್ವಸತಿ ಮಾಡುವುದು ಅತ್ಯಗತ್ಯ’ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಸರಕಾರ ಈ ವರದಿಯನ್ನು ಒಪ್ಪಿ ಪ್ರತಿಯೊಂದು ಕುಟುಂಬಕ್ಕೂ ಕನಿಷ್ಠ 1 ಎಕರೆ ಭೂಮಿಯನ್ನು ಮಂಜೂರಾತಿ ಮಾಡಿತು. ಇದರ ಪರಿಣಾಮ ಉಡುಪಿ ಜಿಲ್ಲೆಯಲ್ಲಿ ಸುಮಾರು 500 ಕುಟುಂಬಗಳಿಗೆ ಹಕ್ಕುಪತ್ರ ದೊರಕಿತ್ತು. ಆದರೆ ಕುಂದಾಪುರ ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳಿಗೆ ಮಾತ್ರ ಹಕ್ಕು ಪತ್ರ ದೊರಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರ ಉಡುಪಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯದ ಸಂದರ್ಭ ಕೆಂಜೂರು ಗ್ರಾಮದ ಕುಮಾರ್ ಮತ್ತು ಪಾರ್ವತಿರವರ ಮನೆಯಲ್ಲಿ ಬೆಳಗ್ಗಿನ ಉಪಹಾರ ಸೇವನೆ ಮಾಡಿ ಸಂದರ್ಭದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಡೀಮ್ಡ್ ಅರಣ್ಯದಿಂದ ತೆರವಾದ ಭೂಮಿಯಲ್ಲಿ 1000 ಎಕರೆ ಕಂದಾಯ ಭೂಮಿಯನ್ನು ಕೊರಗ ಸಮುದಾಯದವರಿಗೆ ಹಕ್ಕುಪತ್ರ ನೀಡುವುದಾಗಿ’ ಘೋಷಣೆ ಮಾಡಿದರು. ಇದಕ್ಕೆ ಪೂರಕವಾಗಿ ಹಾಗೂ ಇದರ ಮುಂದುವರಿಕೆಯ ಪ್ರಕ್ರಿಯೆಯಾಗಿ ಸಂಘಟನೆಯ ವತಿಯಿಂದ ಕುಂದಾಪುರ ತಾಲೂಕಿನಲ್ಲಿ ಸಂಘಟನೆಯ ವಿಶೇಷ ಸಭೆಗಳು, ಗುಂಪು ಸಭೆಗಳು, ಕ್ಷೇತ್ರ ಕಾರ್ಯ ಮಾಡಿ ಭೂರಹಿತರಿಂದ ದರ್ಖಾಸು ಅರ್ಜಿ ಸಂಗ್ರಹಿಸಿ ಸಾಮೂಹಿಕವಾಗಿ ನೀಡಲಾಗಿದೆ. ಈ ಬೇಡಿಕೆ ಯನ್ನು ವಿಶೇಷವಾಗಿ ಪರಿಗಣಿಸಿ ಇಂದಿನಿಂದ ಸರಕಾರಿ ಭೂಮಿಯನ್ನು ಗುರುತಿ ಸುವ ಪ್ರಕ್ರಿಯೆ ಪ್ರಾರಂಭಿಸಿ ಕಾರ್ಯಬದ್ದ ಕ್ರಿಯಾ ಯೋಜನೆ ತಯಾರಿಸಿ ಮುಂದಿನ 3 ತಿಂಗಳಲ್ಲಿ ಹಕ್ಕುಪತ್ರ ಮಂಜೂರಾತಿಗಾಗಿ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಮನವಿಯಲ್ಲಿ ಒತ್ತಾಯಿಸಿದೆ. ಮನವಿಯನ್ನು ಕುಂದಾಪುರ ಉಪತಹಶಿಲ್ದಾರ್ ವಿನಯ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೊರಗರ ಅಭಿವೃದ್ಧಿ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯ ದರ್ಶಿ ಕೆ.ಪುತ್ರನ್, ಕುಂದಾಪುರ ಪುರಸಭಾ ಸದಸ್ಯ ಪ್ರಭಾಕರ್ ವಿ., ಸಮಗ್ರ ಗ್ರಾಮೀಣ ಆಶ್ರಮ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೊರಗ ಸಮುದಾಯದ ಪ್ರಮುಖ ರಾದ ಕುಮಾರದಾಸ್ ಹಾಲಾಡಿ, ಬೇಬಿ ವಂಡ್ಸೆ ಮೊದಲಾದವರು ಉಪಸ್ಥಿತ ರಿದ್ದರು. "ಕುಂದಾಪುರ ತಾಲೂಕಿನಲ್ಲಿ ಹಕ್ಕುಪತ್ರ ದೊಡ್ಡ ಸಮಸ್ಯೆಯಾಗಿದ್ದು ಭೂ ರಹಿತರಿಗೆ ಭೂಮಿ ಸಿಕ್ಕಿದಲ್ಲಿ ಅವರು ಕೃಷಿ ಕಾಯಕ ಮಾಡಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿದೆ. ಸರಕಾರ ಭೂಮಿ ಆಧಾರಿತ ಯೋಜನೆಗಳನ್ನು ಮಂಜೂರು ಮಾಡುತ್ತಿರುವುದರಿಂದ ಕೊರಗ ಸಮುದಾಯಕ್ಕೆ ಯಾವುದೇ ಯೋಜನೆ ಪ್ರಯೋಜನ ಸಿಗುತ್ತಿಲ್ಲ. ಪ್ರತಿ ಯೋಜನೆಗೆ ಭೂಮಿ ಬಹಳ ಅಗತ್ಯವಾಗಿರುವ ಕಾರಣ ಸಂಘಟನೆ ವತಿಯಿಂದ ಪ್ರತಿ ತಾಲೂಕಿನಲ್ಲಿ ಪಟ್ಟಿ ಮಾಡಿ ಭೂಮಿ ಸಿಗುವ ಬಗ್ಗೆ ಸಾಮೂಹಿಕ ಹಕ್ಕೋತ್ತಾಯ ಮಾಡುತ್ತಿದ್ದೇವೆ". -ಕೆ.ಪುತ್ರನ್, ಪ್ರಧಾನ ಕಾರ್ಯದರ್ಶಿ, ಕೊರಗರ ಅಭಿವೃದ್ಧಿ ಸಂಘಗಳ ಒಕ್ಕೂಟ

Similar News