×
Ad

ಉಡುಪಿ ಜಿಲ್ಲಾಮಟ್ಟದ ದಿವ್ಯಾಂಗರ ಸಮಾವೇಶ, ಪ್ರತಿಭಾ ಪ್ರದರ್ಶನ

Update: 2022-12-16 20:24 IST
ಉಡುಪಿ : ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಘಟಕ, ಜಿಲ್ಲಾ ಮಟ್ಟದ ಸಮಗ್ರ ವಿಕಲಚೇತನ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ಉಡುಪಿ ಜಿಲ್ಲಾ ಘಟಕ ಹಾಗೂ ದಿವ್ಯಾಂಗರ ರಕ್ಷಣಾ ಸಮಿತಿ(ಕೊಡವೂರು) ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ದಿವ್ಯಾಂಗರ ಎರಡು ದಿನಗಳ ಸಮಾವೇಶ, ಪ್ರತಿಭಾ ಪ್ರದರ್ಶನ ಮತ್ತು ದಿವ್ಯಾಂಗರ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ಉದ್ಘಾಟನೆ ಗೊಂಡಿತು. ಎರಡು ದಿನಗಳ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಉಡುಪಿ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ರತ್ನಾ ಮಾತನಾಡಿ, ಮಕ್ಕಳಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ ವೈಕಲ್ಯ ತಡೆಗಟ್ಟುವ ನಿಟ್ಟಿನಲ್ಲಿ ಹೆತ್ತವರಿಗೆ ವೈದ್ಯಕೀಯ ಅರಿವು ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟರು. ದಿವ್ಯಾಂಗರಿಗೆ ವೈದ್ಯಕೀಯ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಸಾಮಾಜಿಕ ಪುನರ್ವಸತಿ ಮುಖ್ಯ. ಮಕ್ಕಳ ಜನನ ಪೂರ್ವ, ಜನನ ನಂತರದ ಐದು ವರ್ಷದೊಳಗೆ ಮಕ್ಕಳಲ್ಲಿರುವ ದೈಹಿಕ ನ್ಯೂನತೆ ಆದಷ್ಟು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶಿವಕುಮಾರಯ್ಯ ಮಾತನಾಡಿ, ಸರಕಾರಿ ಸೌಲಭ್ಯ ಪಡೆಯಲು ದಿವ್ಯಾಂಗರು ಸಂಘಟಿತರಾಗಬೇಕು. ಎಲ್ಲ ಅರ್ಹರಿಗೆ ಸೌಲಭ್ಯ ಸಿಗುವಂತಾಗಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಜಿ.ಎನ್.ನಾಗರಾಜ ಮಾತನಾಡಿ, ದಿವ್ಯಾಂಗರೆಲ್ಲರಿಗೂ ಶಿಕ್ಷಣ, ಉದ್ಯೋಗದ ಜೊತೆಗೆ ಘನತೆಯ ಬದುಕು ದೊರೆಯಬೇಕು. ಅಂಗವಿಕಲರ ರಕ್ಷಣಾ ಕಾಯಿದೆ ೨೦೧೬ರಲ್ಲಿರುವ ಎಲ್ಲಾ ಅಂಶಗಳನ್ನು ಜಾರಿಗೊಳಿಸಬೇಕು. ಸರಕಾರಿ ಉದ್ಯೋಗದಲ್ಲಿರುವ ಶೇ.೪ರಿಂದ ೫ರಷ್ಟು ಮೀಸಲನ್ನು ಶೇ.೧೦ಕ್ಕೆ ಏರಿಸ ಬೇಕು. ಖಾಸಗಿ ಕ್ಷೇತ್ರದಲ್ಲೂ ಶೇ.೧೦ ಮೀಸಲು ಜಾರಿಗೆ ಬರಬೇಕು ಎಂದರು. ಪ್ರತಿ ವರ್ಷ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಪ್ರದೇಶಾ ಭಿವೃದ್ಧಿ ನಿಧಿಯಲ್ಲಿ ೧೦ಲಕ್ಷ ರೂ. ದಿವ್ಯಾಂಗರ ಅಭಿವೃದ್ಧಿಗೆ ಮೀಸಲಿಡುವುದು ಕಡ್ಡಾಯವಾಗಬೇಕು. ಸರಕಾರ, ಪ್ರತಿಪಕ್ಷದಿಂದ ಮಾಸಿಕ ೩,೦೦೦ರೂ. ಮಾಸಾಶನದ ಭರವಸೆ ಈಡೇರಿಲ್ಲ. ಮಾಸಾಶನವನ್ನು ೫,೦೦೦ರೂ.ಗಳಿಗೆ ಏರಿಸಬೇಕು. ಶೇ.೭೫ಕ್ಕಿಂತ ಹೆಚ್ಚು ಅಂಗವೈಕಲ್ಯವುಳ್ಳ ಪುರುಷರಿಗೆ ೭,೫೦೦ರೂ. ಹಾಗೂ ಮಹಿಳೆಯರಿಗೆ ೯,೦೦೦ರು. ಮಾಸಾಶನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಬಿ. ಮಂಜುನಾಥ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ವೆಂಕಟೇಶ್ ಕೋಣಿ, ಉಪ್ಪೂರಿನ ಸ್ಪಂದನ ವಿಶೇಷ ಶಾಲಾ ಸ್ಥಾಪಕ/ಪ್ರಿನ್ಸಿಪಾಲ್ ಜನಾರ್ದನ್, ಯಶೋದಾ ರಾಮಚಂದ್ರ, ಉದಯ ಪೂಜಾರಿ ಮಠದಬೆಟ್ಟು, ಜಯ ಪೂಜಾರಿ ಕಲ್ಮಾಡಿ, ಡಯಟ್‌ನ ಉಪನ್ಯಾಸಕ ಚಂದ್ರ ನಾಯ್ಕ್, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಟ್ರಸ್ಟಿ ಸಂಧ್ಯಾ ರಮೇಶ್, ಬೆನ್ನು ಮೂಳೆ ಮುರಿತಕ್ಕೊಳಗಾದವರ ಸಂಘಟನೆ(ಸೌತಡ್ಕ) ನಿರ್ದೇಶಕ ರೆಯಾನ್ ಫರ್ನಾಂಡಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಗೌರವ ಸಲಹೆಗಾರ ನಿರಂಜನ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಗರಸಭೆ ಸದಸ್ಯ ವಿಜಯ ಕೊಡವೂರು ಸ್ವಾಗತಿಸಿದರು. ರಾಜಶೇಖರ್ ಪಿ. ಶ್ಯಾಮ ರಾವ್ ನಿರೂಪಿಸಿದರು. ಇದಕ್ಕೂ ಮೊದಲು ಕಲ್ಸಂಕದ ಬಳಿಯಿಂದ ದಿವ್ಯಾಂಗರ ಮೆರವಣಿಗೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್. ಉದ್ಘಾಟಿಸಿದರು.

Similar News