×
Ad

ಇಂಜಿನಿಯರಿಂಗ್ ಕಾಲೇಜುಗಳ ಪಠ್ಯಕ್ರಮದಲ್ಲಿ ಬದಲಾವಣೆ ಅಗತ್ಯ: ವಿನಯ ಹೆಗ್ಡೆ

ಕಾಮೆಡ್ ಕೇರ್ಸ್‌ ಇನ್ನೋವೇಶನ್ ಹಬ್ ಕಾರ್ಯಕ್ರಮ

Update: 2022-12-16 20:55 IST

ಮಂಗಳೂರು, ಡಿ.16: ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಇಂಜಿನಿಯರಿಂಗ್ ಕಾಲೇಜುಗಳ ಪಠ್ಯಕ್ರಮದಲ್ಲಿ ಕೂಡ ಬದಲಾವಣೆ ಮಾಡುವ ಅಗತ್ಯವಿದೆ. ಇದರಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉದ್ಯೋಗ ಬೇಟೆಯಲ್ಲಿ ಗೆಲ್ಲುವ ಅವಕಾಶ ಸಿಗಲಿದೆ ಎಂದು ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎನ್. ವಿನಯ ಹೆಗ್ಡೆ ಹೇಳಿದರು.

ಕಾಮೆಡ್-ಕೇ ವತಿಯಿಂದ ನಗರದ ಭಾರತ್ ಮಾಲ್‌ನಲ್ಲಿ ಶುಕ್ರವಾರ ನಡೆದ ಕಾಮೆಡ್ ಕೇರ್ಸ್‌  ಇನ್ನೋವೇಶನ್ ಹಬ್‌ವನ್ನು ಅವರು ಉದ್ಘಾಟಿಸಿ ಮಾತನಾಡಿದರು,

ಮೆಕಾನಿಕಲ್, ಸಿವಿಲ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನ ಬೇಡಿಕೆ ಈಗ ಕಡಿಮೆಯಾಗುತ್ತಿದೆ. ಕಂಪ್ಯೂಟರ್ ವಿಚಾರದ ಇಂಜಿನಿಯರಿಂಗ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಕೋರ್ಸ್‌ಗಳ ವಿಷಯದಲ್ಲಿ ಹೊಂದಾಣಿಕೆಯ ಕೊರತೆಯಿಯಿಂದ ಈ ಸಮಸ್ಯೆ ಉಂಟಾಗಿವೆ. ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಉದ್ಯೋಗ ಸಿಗದೇ ಅಲೆದಾಡಬೇಕಾಗುತ್ತದೆ. ಈ ವಿಚಾರಗಳನ್ನು ಮನದಟ್ಟುಮಾಡಿಕೊಂಡು ಪಠ್ಯಕ್ರಮದಲ್ಲಿ ಬದಲಾವಣೆಯನ್ನು ತರುವ ಅಗತ್ಯವಿದೆ ಎಂದು ವಿನಯ ಹೆಗ್ಡೆ ಹೇಳಿದರು.

ಕಾಮೆಡ್- ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್. ಕುಮಾರ್ ಮಾತನಾಡಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಹೆಚ್ಚು ಮಾಹಿತಿ ಪಡೆಯಲು ಸಹಾಯ ಮಾಡುವ ಉದ್ದೇಶವನ್ನು ಇನ್ನೋವೇಶನ್ ಹಬ್ ಹೊಂದಿದೆ. ರಾಜ್ಯದ ಎಂಟು ಕಡೆಯಲ್ಲಿ ಇನ್ನೋವೇಶನ್ ಹಬ್‌ಗಳನ್ನು ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ಸಿಐಐ ಮಂಗಳೂರು ಶಾಖೆಯ ಅಧ್ಯಕ್ಷ ಗೌರವ ಹೆಗ್ಡೆ, ಇಆರ್‌ಎ ಫೌಂಡೇಶನ್‌ನ ಸಿಇಒ ಪಿ. ಮುರಳೀಧರ್, ಇಆರ್‌ಎ ಫೌಂಡೇಶನ್ ಅಧ್ಯಕ್ಷ ಬಿ.ಎನ್. ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Similar News