×
Ad

ಬಿಜೆಪಿ ಹೇಳುವ ಸುಳ್ಳುಗಳನ್ನು ತಡೆಯಬೇಕು: ಅಶೋಕ ಕೊಡವೂರು

Update: 2022-12-16 21:09 IST
ಉಡುಪಿ, ಡಿ.16: ಬಿಜೆಪಿ ಪಕ್ಷ ಸಾಮಾಜಿಕ ಜಾಲತಾಣಗಳನ್ನು ಬಳಸಿ ಹರಡುತ್ತಿರುವ ಸುಳ್ಳು ಸುದ್ದಿಗಳು ಜನರ ಮನಸ್ಸನ್ನು ಕುಲುಷಿತಗೊಳಿಸುತ್ತಿದೆ. ಇದನ್ನು ತಡೆಯಲು ಕಾಂಗ್ರೆಸ್ ಪಕ್ಷವೂ ಸಾಮಾಜಿ ಜಾಲತಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಜನರಿಗೆ ಸತ್ಯದ ಮನವರಿಕೆ ಮಾಡಬೇಕಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಹೇಳಿದ್ದಾರೆ. ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ವಕ್ತಾರರ ಹಾಗೂ ಸಾಮಾಜಿಕ ಜಾಲತಾಣದ ಬ್ಲಾಕ್ ಅಧ್ಯಕ್ಷರುಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಯುವಕರು ಸಕ್ರಿಯರಾಗಿದ್ದರೂ ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಜನತೆಗೆ ಅರಿವು ಮೂಡಿಸುವಲ್ಲಿ ವಿಫಲರಾಗಿದ್ದೇವೆ. ಚರಿತ್ರೆಯನ್ನು ತಿರುಚುವ ಬಿಜೆಪಿಯ ಹುನ್ನಾರವನ್ನು, ಸುಳ್ಳುಗಳನ್ನು ಬಿತ್ತರಿಸುವ ಬಿಜೆಪಿಯ ವ್ಯವಸ್ಥಿತ ಜಾಲವನ್ನು ಸಂಪೂರ್ಣ ತಡೆಗಟ್ಟಲು ಜಾಲತಾಣದ ಯುವಕರಿಗೆ ಕಾರ್ಯಾಗಾರವನ್ನು ಏರ್ಪಡಿಸುವ ಚಿಂತನೆ ನಡೆದಿದೆ ಎಂದರು. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ವಕ್ತಾರರು ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥರು ಒಗ್ಗೂಡಿ ಜಾಲತಾಣಗಳ ಮೂಲಕ ಜನರಿಗೆ ನಿಜಸ್ಥಿತಿ ತಲುಪುವಂತೆ ಮಾಡಬೇಕು.ಬಿಜೆಪಿ ಅಭಿವೃದ್ಧಿಯ ಚಿಂತನೆ ಬಿಟ್ಟು ಧರ್ಮ ಹಾಗೂ ಸುಳ್ಳು ಸುದ್ದಿಗಳಿಗೆ ಪ್ರಾಧಾನ್ಯತೆಯನ್ನು ನೀಡುತ್ತಿರುವುದು ಜನತೆಯ ಅರಿವಿಗೆ ಬರಬೇಕಿದೆ ಎಂದರು. ಸಭೆಯಲ್ಲಿ ಬಿಪಿನ್ ಚಂದ್ರಪಾಲ್ ನಕ್ರೆ, ಬಿ.ಕುಶಲ ಶೆಟ್ಟಿ, ಅಮೃತ ಶೆಣೈ, ಹಬೀಬ್ ಆಲಿ, ಚಂದ್ರಶೇಖರ ಶೆಟ್ಟಿ, ಉದ್ಯಾವರ ನಾಗೇಶ್‌ಕುಮಾರ್, ಲಕ್ಷ್ಮೀನಾರಾಯಣ ಹಿರಿಯಡ್ಕ, ಜಯಂತ್ ರಾವ್ ಹಿರಿಯಡ್ಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪಕ್ಷದ ಮುಖಂಡರಾದ ಕೀರ್ತಿ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ, ಸತೀಶ್ ಕಾರ್ಕಳ, ದಯಾನಂದ, ಉದಯ ಆಚಾರ್ಯ ಜಯ ಕುಮಾರ, ವಿಶು ಕುಮಾರ, ಜಿ.ಸುಂರ್ದ, ದಿನೇಶ್, ರಘು ಬಿಲ್ಲವ, ಹಮೀದ್, ಮಹಮ್ಮದ್ ಶ್ರೀಶ್ ಉಪಸ್ಥಿತರಿದ್ದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಸ್ವಾಗತಿಸಿ, ಕೋ-ಆಪರೇಟಿವ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ವಂದಿಸಿದರು. ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ರೋಶನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Similar News