ಬಿಹಾರದಲ್ಲಿ ಮತ್ತೊಂದು ಕಳ್ಳಭಟ್ಟಿ ದುರಂತ: 8 ಮಂದಿ ಮೃತ್ಯು

Update: 2022-12-17 15:17 GMT

ಪಾಟ್ನಾ, ಡಿ.19: ಸಾರನ್ ಜಿಲ್ಲೆಯಲ್ಲಿ 26ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಕಳ್ಳಭಟ್ಟಿ ದುರಂತದ ಬೆನ್ನಲ್ಲೇ ಬಿಹಾರದ ಇನ್ನೆರಡು ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಸಾರನ್ನ ನೆರೆಜಿಲ್ಲೆಯಾದ ಸಿವಾನ್ನಲ್ಲಿ ಆರು ಮಂದಿ ಸಾವನ್ನಪ್ಪಿದ್ದರೆ, ಬೆಗುಸರಾಯ್ನಲ್ಲಿ ಇನ್ನೆರಡು ಸಾವುಗಳು ಸಂಭವಿಸಿವೆಯೆಂದು ಮೂಲಗಳು ತಿಳಿಸಿವೆ.
ಸಾರನ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ ಮೃತಪಟ್ಟವರ ಸಂಖೆ 60ಕ್ಕೇರಿರುವುದಾಗಿ ಕೆಲವು ಅನಧಿಕೃತ ಮೂಲಗಳು ತಿಳಿಸಿರುವುದಾಗಿ ಪ್ರೆಸ್ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.ಸರಕಾರಿ ದಾಖಲೆಗಳಲ್ಲಿ ಸಾರನ್ನ ಕಳ್ಳಭಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 30 ಆಗಿದ್ದರೂ, ಇದು ಆರು ವರ್ಷಗಳ ಹಿಂದೆ ಬಿಹಾರದಲ್ಲಿ ಮದ್ಯ ನಿಷೇಧ ಜಾರಿಗೊಳಿಸಿದ ಬಳಿಕ ಸಂಭವಿಸಿ ಅತಿ ದೊಡ್ಡ ನಕಲಿಮದ್ಯ ದುರಂತವಾಗಿದೆ.

ಗುರುವಾರದಿಂದೀಚೆಗೆ ಸಿವಾನ್ ಜಿಲ್ಲೆಯ ಭಗವಾನ್ಪುರದಲ್ಲಿ ನಕಲಿ ಮದ್ಯ ಸೇವಿಸಿ ಆರು ಮಂದಿ ಮೃತಪಟ್ಟಿರುವುದಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸಂಜಯ್ ಕುಮರಮಾರ್ ತಿಳಿಸಿದ್ದು, ಜಿಲ್ಲಾಡಳಿತವು ತನಿಖೆ ಆರಂಬಿಸಿದೆ ಎಂದರು.

ಮದ್ಯ ಮಾರಾಟ ಹಾಗೂ ಖರೀದಿಯಲ್ಲಿ ತೊಡಗಿರುವವರನ್ನು ಸೆರೆಹಿಡಿಲು ಪ್ರದೇಶದೆಲ್ಲೆಡೆ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆಯೆಂದು ಕುಮಾರ್ ತಿಳಿಸಿದರು.
ಬೆಗುಸರಾಯ್ ಜಿಲ್ಲೆಯಲ್ಲಿ ಒಂದು ಬಗೆಯ ವಿಷಕಾರಿಯಾದ ರಾಸಾಯನಿಕವನ್ನು ಸೇವಿಸಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆಂದು ಪೊಲೀಸ್ ಉಪಅಧೀಕ್ಷಕ ಚಂದ್ರಮೋಹನ್ ಪ್ರಸಾದ್ ತಿಳಿಸಿದ್ದಾರೆ.

Similar News