ಭಿಕ್ಷೆ ಬೇಡುತ್ತಿದ್ದ ಬಾಲಕ ಕೋಟ್ಯಧಿಪತಿಯಾಗಿದ್ದು ಹೇಗೆ ಗೊತ್ತೇ ?

Update: 2022-12-17 04:45 GMT

ರೂರ್ಕಿ: ಪಿರಾನ್ ಕಲಿಯಾರ್ ಪ್ರಾರ್ಥನಾ ಮಂದಿರದ ಮುಂದೆ ಭಿಕ್ಷೆಗಾಗಿ ಕೈ ಚಾಚುತ್ತಿದ್ದ 10 ವರ್ಷದ ಶಹ್‌ಜೆಬ್ ಆಲಂ, ನಾಪತ್ತೆಯಾಗಿ ಒಂದು ವರ್ಷ ಬಳಿಕ ಇದೀಗ ಕೋಟ್ಯಧಿಪತಿಯಾಗಿ ಮನೆಗೆ ಮರಳಿರುವುದು ಅಚ್ಚರಿ ಮೂಡಿಸಿದೆ ಎಂದು timesofindia.com ವರದಿ ಮಾಡಿದೆ.

ಶಹ್‌ಜೆಬ್, ಉತ್ತರ ಪ್ರದೇಶದ ಸಹರಣ್‍ಪುರ ಜಿಲ್ಲೆಯ ಪಂದುಲಿ ಗ್ರಾಮದ ದಂಪತಿಯ ಏಕೈಕ ಪುತ್ರ. ತಂದೆ ಮೊಹ್ಮದ್ ನವೀದ್ 2019ರಲ್ಲಿ ಸುಧೀರ್ಘ ಅಸ್ವಸ್ಥತೆಯಿಂದ ಮೃತಪಟ್ಟಿದ್ದರು. ತಾಯಿ ಇಮ್ರಾನಾ ಬೇಗಂ, ನವೀದ್ ಸಾವಿಗೆ ಕೆಲ ದಿನಗಳ ಮುನ್ನ ಮನೆ ಬಿಟ್ಟು ಹೋಗಿ, ಪೋಷಕರ ಜತೆ ಶಹ್‌ಜೆಬ್ ನೊಂದಿಗೆ ಯಮುನಾ ನಗರದಲ್ಲಿ ವಾಸವಿದ್ದರು. ಬಳಿಕ ಅವರನ್ನು ಜೀವನೋಪಾಯದ ಸಲುವಾಗಿ ಮಗನ ಜತೆಗೆ ಪಿರಾನ್ ಕಲಿಯಾರ್‌ಗೆ ಸ್ಥಳಾಂತರಿಸಲಾಗಿತ್ತು.

ಆದರೆ ಬಾಲಕನಿಗೆ ಮತ್ತೆ ದುರಂತ ಕಾದಿತ್ತು. 2021ರಲ್ಲಿ ಇಮ್ರಾನಾ, ಕೋವಿಡ್-19 ಸೋಂಕಿಗೆ ಬಲಿಯಾದರು. ಆತನನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಪಿರಾನ್ ಕಲಿಯಾರ್‍ನಲ್ಲಿ ಆಶ್ರಯ ಪಡೆಯುವಂತೆ ಸ್ಥಳೀಯರು ಸಲಹೆ ಮಾಡಿದರು. ಪಿರಾನ್ ಕಲಿಯಾರ್ ಎನ್ನುವುದು ಸೂಫಿ ಪಂಥದ ಪ್ರಸಿದ್ಧ ಪ್ರಾರ್ಥನಾ ಮಂದಿರವಾಗಿದೆ. ಆ ಬಳಿಕ ಅನಾಥನಾಗಿದ್ದ ಶಹ್‌ಜೆಬ್ ಅಲ್ಲಿ ವಾಸವಿದ್ದು, ಭಿಕ್ಷಾಟನೆ ಮಾಡಿಕೊಂಡಿದ್ದ.

ಆದರೆ ಆತನ ಅಜ್ಜ ಮೊಹ್ಮದ್ ಯಾಕುಬ್ ತಮ್ಮ ಉಯಿಲಿನಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ತನ್ನ ಮಗ ಮೃತ ನವೀದ್ ಅವರ ಪುತ್ರ ಶಹ್‌ಜೆಬ್‌ಗೆ ನೀಡಬೇಕು ಎಂದು ಸೂಚಿಸಿದ್ದರು. 2021ರಲ್ಲಿ ಅಜ್ಜ ಮೃತಪಟ್ಟ ಬಳಿಕ, ಎರಡು ಮಹಡಿಯ ಮನೆ ಹಾಗೂ 5 ಬಿಗಾ ಭೂಮಿ ಅಧಿಕೃತವಾಗಿ ಬಾಲಕನಿಗೆ ಬಂತು. ಆದರೆ ಆತ ಎಲ್ಲೂ ಪತ್ತೆಯಾಗಿರಲಿಲ್ಲ. ಶಹ್‌ಜೆಬ್‌ನ ಸಂಬಂಧಿಕರು ಈತನ ಮಾಹಿತಿಯನ್ನು ನೀಡಿ ಹುಡುಕಾಟ ಆರಂಭಿಸಿದರು. ಬಾಲಕ ಪಿರಾನ್ ಕಲಿಯಾರ್‍ನಲ್ಲಿ ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ಸುದ್ದಿ ಸಿಕ್ಕಿತು. ಸಹರಣಪುರದಿಂದ ತಕ್ಷಣ ಆಗಮಿಸಿದ ಅವರು ಬಾಲಕನೊಂದಿಗೆ ವಾಪಸ್ಸಾದರು.

"ಶಹ್‌ಜೆಬ್ ನಮ್ಮ ಕುಟುಂಬಕ್ಕೆ ಮತ್ತೆ ಸೇರಿಕೊಂಡಿರುವುದು ನಮಗೆ ಹಬ್ಬಕ್ಕಿಂತಲೂ ಹೆಚ್ಚು. ಆತ ಪತ್ತೆಯಾಗುತ್ತಾನೆ ಎಂಬ ಭರವಸೆಯನ್ನು ನಾವು ಕಳೆದುಕೊಂಡಿದ್ದೆವು" ಎಂದು ಸಂಬಂಧಿ ಶಾ ಅಲಮ್ ಹೇಳಿದ್ದಾರೆ. ಬಾಲಕನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. 

Similar News