×
Ad

ಕಟಪಾಡಿ ಜಂಕ್ಷನ್‌ನಲ್ಲಿ ಸಂಚಾರ ಸಮಸ್ಯೆ ಪರಿಹಾರಕ್ಕೆ ಪೊಲೀಸರಿಂದ ಕ್ರಮ

Update: 2022-12-17 16:53 IST

ಕಾಪು, ಡಿ.17: ಟ್ರಾಪಿಕ್ ಸಮಸ್ಯೆ ಮತ್ತು ದಿನನಿತ್ಯ ನಡೆಯುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶ ದೊಂದಿಗೆ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷ ಅಕ್ಷಯ್ ಹಾಕೆ ಮಚ್ಚೀಂದ್ರ ನೇತೃತ್ವದಲ್ಲಿ ಸುಗಮ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ.

ಗುರುವಾರ ಜಿಲ್ಲಾ ಎಸ್ಪಿ ಅಕ್ಷಯ ಹಾಕೆ ಮಚ್ಚೀಂದ್ರ, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ, ಕಾರ್ಕಳ ವಿಭಾಗದ ಸಹಾಯಕ ಎಸ್ಪಿ ವಿಜಯಾ ಪ್ರಸಾದ್ ಕಟಪಾಡಿ ಜಂಕ್ಷನ್‌ಗೆ ಭೇಟಿ ನೀಡಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಾಧಕ ಬಾಧಕಗಳ ಬಗ್ಗೆ ಅವಲೋಕನ ನಡೆಸಿದರು.

ಎಸ್ಪಿ ಸೂಚನೆ ಮೇರೆಗೆ ಶುಕ್ರವಾರ ಕಾಪು ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಹಾಗೂ ಕಾಪು ಠಾಣಾಧಿಕಾರಿ ಶ್ರೀಶೈಲ ಮುರುಗೋಡ್‌ಮಠ ಮತ್ತು ಅಪರಾಧ ಎಸ್ಸೈ ಭರತೇಶ್ ಸಹಿತ ಅಧಿಕಾರಿಗಳು ಸಿಬಂದಿ ಜೊತೆ ರಸ್ತೆಗಿಳಿದು ವಾಹನ ಸಂಚಾರನ್ನು ಸುವ್ಯವಸ್ಥಿತಗೊಳಿಸಲು ಬೆಳಗ್ಗಿನಿಂದಲೇ ಕಾರ್ಯಪ್ರವೃತ್ತರಾದರು. ಸ್ಥಳೀಯರು, ವ್ಯಾಪಾರಸ್ಥರು ಮತ್ತು ರಿಕ್ಷಾ ಟ್ಯಾಕ್ಸೀ ಚಾಲಕರು ಮತ್ತು ವಾಹನ ಚಾಲಕರಿಗೆ ಸುಲಲಿತ ವಾಹನ ಸಂಚಾರದ ಬಗ್ಗೆ ಮಾಹಿತಿ ನೀಡಿ, ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು.

ಖಾಸಗಿ ಬಸ್‌ಗಳು ಕಡ್ಡಾಯವಾಗಿ ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿ ಹೋಗದೆ, ಒಳಗಿನ ಬಸ್ ನಿಲ್ದಾಣ ತಲುಪಿ ಹಳೆ ಎಂಬಿಸಿ ರೋಡ್ ಬಳಸಿಕೊಂಡು ಉಡುಪಿಗೆ ಹೋಗುವಂತೆ ಆದೇಶಿಸಲಾಯಿತು. ಸರ್ವಿಸ್ ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಖಾಸಗಿ ಬಸ್‌ಗಳ ಮೇಲೆ ಕ್ರಮಕ್ಕೆ ತೆಗೆದುಕೊಳ್ಳಲಾಯಿತು. ಕಡ್ಡಾಯವಾಗಿ ಬಸ್ ನಿಲ್ದಾಣ ದಲ್ಲಿಸಿ ನಿಲ್ಲಿಸಿ, ಪ್ರಯಾಣಿಕರು ಹತ್ತಿಸಿಕೊಳ್ಳುವಂತೆ ಖಡಕ್ ಎಚ್ಚರಿಕೆ ನೀಡ ಲಾಯಿತು. ರಸ್ತೆ ಬದಿ ಅನಧಿಕೃತ ಪಾರ್ಕಿಂಗ್‌ಗಳಿಗೆ ಕಡಿವಾಣ ಹಾಕಲಾಯಿತು. ಧ್ವನಿವರ್ಧಕವನ್ನು ಬಳಸಿ ಕ್ಷಣಕ್ಷಣಕ್ಕೂ ವಾಹನ ಚಾಲಕರು ಮತ್ತು ಪಾದಾಚಾರಿ ಗಳನ್ನು ಎಚ್ಚರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

Similar News