ಲಂಡನ್: ತನ್ನಿಬ್ಬರು ಮಕ್ಕಳೊಂದಿಗೆ ಶವವಾಗಿ ಪತ್ತೆಯಾದ ಕೇರಳ ಮೂಲದ ನರ್ಸ್
ʼಮಗಳ ಪತಿ ಕ್ರೂರಿಯಾಗಿದ್ದʼ ಎಂದು ಆರೋಪಿಸಿದ ಸಂತ್ರಸ್ತೆಯ ಪೋಷಕರು
ಕೊಟ್ಟಾಯಂ: ಬ್ರಿಟನ್ ನಲ್ಲಿ ಕೇರಳ ಮೂಲದ ನರ್ಸ್ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳು ಶವವಾಗಿ ಪತ್ತೆಯಾದ ಒಂದು ದಿನದ ಬಳಿಕ, ಮೃತ ಮಹಿಳೆಯ ಕುಟುಂಬಸ್ಥರು ಆಕೆಯ ಪತಿಯ ವಿರುದ್ಧ ಗಂಭೀರ ಆರೋಪ ಹೊರಿಸಿದೆ. ತಮ್ಮ ಮಗಳ ಪತಿ "ಕ್ರೂರ" ವ್ಯಕ್ತಿಯಾಗಿದ್ದು, ಈ ಹಿಂದೆಯೂ ಹಲವು ಬಾರಿ ತಮ್ಮ ಮಗಳು ಮತ್ತು ಮೊಮ್ಮಗನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸಂತ್ರಸ್ತೆ ಕುಟುಂಬ ಆರೋಪಿಸಿದೆ.
ಉದ್ಯೋಗವನ್ನರಸಿ ಯುಕೆಗೆ ಹೋಗಿದ್ದ 35 ವರ್ಷದ ಅಂಜು ಅಶೋಕ್ 2021 ರಿಂದ ಕೆಟ್ಟರಿಂಗ್ ಜನರಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಂಜು ಮತ್ತು ಅವರ ಇಬ್ಬರು ಮಕ್ಕಳು ಗುರುವಾರ ಪೂರ್ವ ಇಂಗ್ಲೆಂಡ್‌ನ ನಾರ್ಥಾಂಪ್ಟನ್ ಪ್ರದೇಶದ ಕೆಟೆರಿಂಗ್‌ನಲ್ಲಿರುವ ಅವರ ಮನೆಯಲ್ಲಿ ಗಂಭೀರವಾದ ಗಾಯಗಳೊಂದಿಗೆ ಪತ್ತೆಯಾಗಿದ್ದರು. ಸ್ಥಳೀಯ ಪೊಲೀಸರ ಪ್ರಕಾರ, ಅಂಜು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ರಾಜ್ಯದ ಕೊಟ್ಟಾಯಂ ಜಿಲ್ಲೆಯ ವೈಕೋಮ್ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಂಜು ಅಶೋಕ್ ಅವರ ಪೋಷಕರು, ʼತಮ್ಮ ಮಗಳನ್ನು ಬಟ್ಟೆ ಅಥವಾ ಹಗ್ಗದಿಂದ ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಹಿಂದಿನ ರಾತ್ರಿ ತಿಳಿಸಿದ್ದರುʼ ಎಂದು ಹೇಳಿದ್ದಾರೆ.
ಅವರ ಮೊಮ್ಮಕ್ಕಳ ಮರಣೋತ್ತರ ಪರೀಕ್ಷೆ ಇಂದು ನಡೆಯಬೇಕಿತ್ತು.
ಅಂಜು ಅವರ ತಾಯಿ ತನ್ನ ಅಳಿಯ ಸಾಜು "ಕ್ರೂರ" ವ್ಯಕ್ತಿ ಎಂದು ಆರೋಪಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದಾಗ ಅವರು ತಮ್ಮ ಮಗಳು ಮತ್ತು ಮೊಮ್ಮಗನ ಮೇಲೆ ಹಲ್ಲೆ ಆತ ನಡೆಸುವುದನ್ನು ತಾವು ನೋಡಿರುವುದಾಗಿ ಅವರು ಹೇಳಿದ್ದಾರೆ.
“ಮೊಮ್ಮಗಳು ಹುಟ್ಟಿದಾಗ ಅವರ ಜೊತೆಯಲ್ಲಿಯೇ ಇದ್ದೆ, ಅಂಜು ಮತ್ತು ಮೊಮ್ಮಗನಿಗೆ ಹೊಡೆದದ್ದನ್ನು ನಾನು ನೋಡಿದ್ದೇನೆ, ಅವನು ಕ್ರೂರ ವ್ಯಕ್ತಿ, ಅವನು ಬೇಗನೆ ಕೋಪಗೊಳ್ಳುತ್ತಾನೆ, ಅವನ ಮನೆಯಲ್ಲಿ ಅವನೊಂದಿಗೆ ಒಬ್ಬಂಟಿಯಾಗಿರಲು ನನಗೆ ಭಯವಾಗುತ್ತಿತ್ತು.” ಎಂದು ಅಂಜು ತಾಯಿ ಹೇಳಿದ್ದಾರೆ.
"ಆದರೆ ನನ್ನ ಮಗಳು ಎಂದಿಗೂ ದೂರು ಹೇಳಲಿಲ್ಲ. ನಾವು ಚಿಂತಿಸಬಾರದು ಎಂದು ಅವಳು ಮೌನವಾಗಿ ಎಲ್ಲವನ್ನೂ ಅನುಭವಿಸಿದಳು. ಅವರು ಇಂಗ್ಲೆಂಡ್‌ಗೆ ತೆರಳಿದಾಗ ಅವನ ಕ್ರೌರ್ಯವು ಮುಂದುವರೆಯಿತು ಎಂದು ನನಗೆ ಖಾತ್ರಿಯಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಅಂಜು ಅವರ ಪೋಷಕರು ತಮ್ಮ ಮಗಳು ಮತ್ತು ಮೊಮ್ಮಕ್ಕಳನ್ನು ಕೊನೆಯ ಬಾರಿಗೆ ನೋಡಲು ಬಯಸುತ್ತಿದ್ದಾರೆ, ಆದರೆ ಅದಕ್ಕಾಗಿ ಅವರಿಗೆ ಸುಮಾರು ₹ 30 ಲಕ್ಷ ಬೇಕಾಗಿದೆ.
"2018 ರ ಪ್ರವಾಹದಲ್ಲಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಈಗ ನಮಗೆ ಇರುವುದು 13 ಸೆಂಟ್ಸ್ ಜಮೀನು ಮತ್ತು ಈ ಮನೆ, ನಾನು ಅದನ್ನು ಮಾರಾಟ ಮಾಡಿದರೆ, ಅನಾರೋಗ್ಯದಿಂದ ಬಳಲುತ್ತಿರುವ ನನ್ನ ಹೆಂಡತಿ ಮತ್ತು ನನಗೆ ನಮ್ಮ ವೃದ್ಧಾಪ್ಯದಲ್ಲಿ ವಾಸಿಸಲು ಸ್ಥಳವಿಲ್ಲ. ಅಷ್ಟು ಹಣವನ್ನು ಸಂಗ್ರಹಿಸಲು ನನಗೆ ಬೇರೆ ದಾರಿಯಿಲ್ಲ” ಎಂದು ಅಂಜು ತಂದೆ ಅಳಲು ತೋಡಿಕೊಂಡಿದ್ದಾರೆ.
"ಜನರು ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಸಹಾಯ ಮಾಡುವವರಿಗೆ ನಾನು ತುಂಬಾ ಕೃತಜ್ಞರಾಗಿರುತ್ತೇನೆ" ಎಂದು ಅವರು ಹೇಳಿದರು.