ಕಾಪು ಬೀಚ್‌ನಲ್ಲಿ 'ಕಡಲ ಐಸಿರ ಬೀಚ್ ಫೆಸ್ಟ್'

Update: 2022-12-19 12:29 GMT

ಕಾಪು : ಕಾಪು ಬೀಚ್‌ನಲ್ಲಿ ನಡೆಯುತ್ತಿರುವ ಕಡಲ ಐಸಿರ ಬೀಚ್ ಫೆಸ್ಟ್-2022ನಲ್ಲಿ ರವಿವಾರ ಭಾರೀ ಜನಸ್ಥೋಮ ಕಂಡುಬಂತು.

ಕಾಪು ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್, ಕಾಪು ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ದಿ. ಆರ್.ಡಿ. ಮೆಂಡನ್ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ನೇತೃತ್ವದಲ್ಲಿ ಬೀಚ್ ಫೆಸ್ಟ್ ಆಯೋಜಿಸಲಾಗಿದೆ.

ಚೆಂಡೆ ಸ್ಪರ್ಧೆ, ಬೀಚ್ ವಾಲಿಬಾಲ್ ಸ್ಪರ್ಧೆ, ಕೊಳಲು ಮತ್ತು ತಬಲ ತಂಡ ಸ್ಪರ್ಧೆ, ಶ್ವಾನ ಸ್ಪರ್ಧೆ, ಈಜು ಸ್ಪರ್ಧೆ, ಹುಟ್ಟು ದೋಣಿ ಸ್ಪರ್ಧೆ, ಮರಳಿನಲ್ಲಿ ಕಲಾಕೃತಿ ರಚನೆ, ಗಾಳಿ ಪಟ ಸ್ಪರ್ಧೆ ಮತ್ತು ಪ್ರದರ್ಶನ ಶಿಲ್ಪ ಗಮನಸೆಳೆಯಿತು.

ವಿಶೇಷ ಆಕರ್ಷಣೆಯಾಗಿ ಕರಾವಳಿ ಶೈಲಿಯ ಪುಡ್ ಪೆಸ್ಟಿವಲ್, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾವಿದರಿಂದ ಸಂಗೀತ ರಸಮಂಜರಿ, ವೈಶಿಷ್ಡ್ಯ ಪೂರ್ಣವಾಗಿ ಕಾಪು ದೀಪಸ್ತಂಭದ ಆವರಣದಲ್ಲಿ ಲೇಸರ್ ಶೋ, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಈಜು ಸ್ಪರ್ಧೆಯ ಎಂಟನೇ ತರಗತಿಯಿಂದ ಪಿಯುಸಿವರೆಗಿನ ವಿಭಾಗದಲ್ಲಿ ಜಿ.ನಿಶಾಲ್ ಭಟ್ ಪ್ರಥಮ, ಸಾಲಿಗ್ರಾಮದ ಮಹಾಲಸಾ ಪೈ ದ್ವಿತೀಯ, ಯಕ್ಷಿತ್ ತೃತೀಯ ಸ್ಥಾನ ಪಡೆದರು. ಹಿರಿಯರ ವಿಭಾಗದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡಿನ ಸ್ಪರ್ಧಾಳುಗಳು ಭಾಗವಹಿಸಿ ಗಮನಸೆಳೆದರು. ತಮಿಳುನಾಡಿನ ಆಸ್ಟಿನ್ ಪ್ರಥಮ ಸ್ಥಾನ ಪಡೆದರೆ, ತಮಿಳುನಾಡಿನ ಇನ್ನೊರ್ವ ಸ್ಪರ್ಧಿ ರಾಜನ್ ಹಾಗೂ ಕಾಪು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್ ನಡುವೆ ತೀವ್ರ ಪೈಪೋಟಿಯಲ್ಲಿ ರಾಜನ್ ದ್ವಿತೀಯ ಸ್ಥಾನ ಪಡೆದುಕೊಂಡರು.

ಬೀಚ್ ಫೆಸ್ಟ್‌ನ ವಿವಿಧ ಸ್ಪರ್ಧೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಕ್ಕೆ ಶನಿವಾರ ಸಂಜೆ ನಡೆದ ಲೇಸರ್ ಶೋ ಹಾಗೂ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ನೃತ್ಯ ಹಾಗೂ ಸಮೂಹ ನೃತ್ಯ ಸ್ಪರ್ಧೆಯು ಪ್ರೇಕ್ಷಕರನ್ನು ರಂಜಿಸಿತು.

Similar News