ಫಿಫಾ ವಿಶ್ವಕಪ್: ಮೆಸ್ಸಿ ಹಲವು ದಾಖಲೆಗಳ ಸರದಾರ..

Update: 2022-12-19 04:03 GMT

ಹೊಸದಿಲ್ಲಿ: ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಭಾನುವಾರ ಎರಡು ಗೋಲುಗಳನ್ನು ಸಿಡಿಸುವ ಮೂಲಕ ಫುಟ್ಬಾಲ್ ಮಾಂತ್ರಿಕ ಲಿಯೊನಲ್ ಮೆಸ್ಸಿ ವಿಶಿಷ್ಟ ದಾಖಲೆ ಸ್ಥಾಪಿಸಿದ್ದಾರೆ.

23ನೇ ನಿಮಿಷದಲ್ಲಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಸ್ಟಾರ್ ಆಟಗಾರ, ಹೆಚ್ಚುವರಿ ಸಮಯದಲ್ಲಿ ಅಂದರೆ 108ನೇ ನಿಮಿಷದಲ್ಲಿ ಮತ್ತೊಂದು ಬಾರಿ ಗೋಲು ಗಳಿಸಿ ವಿಶ್ವಕಪ್ ಫೈನಲ್‌ನಲ್ಲಿ ಎರಡು ಗೋಲುಗಳ ವಿಶಿಷ್ಟ ದಾಖಲೆ ಸ್ಥಾಪಿಸಿದರು. ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ 4-2 ಗೋಲುಗಳ ಜಯ ಸಾಧಿಸಿ ವಿಶ್ವಕಪ್ ಗೆದ್ದ ಪಂದ್ಯದ ಪೆನಾಲ್ಟಿ ಶೂಟೌಟ್‌ನಲ್ಲೂ 35 ವರ್ಷ ವಯಸ್ಸಿನ ಮಾಂತ್ರಿಕ ಗೋಲು ಗಳಿಸಿದರು.

ಮೆಸ್ಸಿ ಇದೀಗ 13 ವಿರ್ಶವಕಪ್ ಗೋಲುಗಳನ್ನು ಗಳಿಸಿದ್ದು, ಫುಟ್ಬಾಲ್ ದಂತಕಥೆ ಎನಿಸಿದ್ದ ಪೀಲೆ ದಾಖಲೆಯನ್ನು ಮುರಿದಿದ್ದಾರೆ. ಅರ್ಜೆಂಟೀನಾ ಪರ 98 ಗೋಲುಗಳನ್ನು ಗಳಿಸಿದ ದಾಖಲೆಗೂ ಅವರು ಪಾತ್ರರಾದರು. ಒಂದು ವಿಶ್ವಕಪ್‌ನ ಗುಂಪು ಹಂತದಲ್ಲಿ, 16ರ ಘಟ್ಟದಲ್ಲಿ, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಹೀಗೆ ಪ್ರತಿ ಹಂತದಲ್ಲೂ ಗೋಲು ಗಳಿಸಿದ ಮೊಟ್ಟಮೊದಲ ಆಟಗಾರ ಎನಿಸಿಕೊಂಡು, ತಮ್ಮ ವಿಶ್ವಕಪ್ ಕನಸು ನನಸಾಗಿಸಿಕೊಂಡರು.
ಫಿಫಾ ವಿಶ್ವಕಪ್‌ನಲ್ಲಿ ಅತ್ಯಧಿಕ ಗೋಲು ಗಳಿಸಿದ ಆಟಗಾರರ ಪೈಕಿ ಮೆಸ್ಸಿ 4ನೇ ಸ್ಥಾನಕ್ಕೇರಿದರು. ಜರ್ಮನಿಯ ಮಿರೋಸ್ಲೋವ್ ಕ್ಲೋಸ್ 16 ಗೋಲುಗಳೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಬ್ರೆಜಿಲ್‌ನ ರೊನಾಲ್ಡೊ (15) ನಂತರದ ಸ್ಥಾನದಲ್ಲಿದ್ದಾರೆ. ಜರ್ಮನಿಯ ಗ್ರೆಡ್ ಮುಲ್ಲರ್ (14) ಮೂರನೇ ಸ್ಥಾನದಲ್ಲಿದ್ದು, ಜೆಸ್ಟ್ ಫಾಂಟೈನ್ (13), ಮೆಸ್ಸಿ ಜತೆಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

Similar News