ವಿಶ್ವಕಪ್ ಸೋಲಿನ ನಂತರ ಎಂಬಾಪೆಯನ್ನು ಸಮಾಧಾನಪಡಿಸಿದ ಫ್ರಾನ್ಸ್ ಅಧ್ಯಕ್ಷ

Update: 2022-12-19 05:56 GMT

ದೋಹಾ: ಫ್ರೆಂಚ್ ಸ್ಟಾರ್ ಸ್ಟ್ರೈಕರ್ ಕಿಲಿಯನ್ ಎಂಬಾಪೆ, ವಿಶ್ವಕಪ್ ಫೈನಲ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ ಹೊರತಾಗಿಯೂ ರನ್ನರ್ಸ್ ಅಪ್ ಗೆ ತೃಪ್ತಿಪಟ್ಟುಕೊಂಡರು. ರವಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಅರ್ಜೆಂಟೀನ ವಿರುದ್ಧ ಸೋಲುಂಡಿತು. ಪಂದ್ಯದ ನಂತರ ನಿರುತ್ಸಾಹದಿಂದ ಮೈದಾನದಲ್ಲಿ ಕುಳಿತ್ತಿದ್ದ  ಎಂಬಾಪೆ ಅವರನ್ನು  ಫ್ರೆಂಚ್ ಅಧ್ಯಕ್ಷ ಇಮಾನುಯಲ್ ಮ್ಯಾಕ್ರೋನ್ ಸ್ವತಃ ಅವರ ಬಳಿ ತೆರಳಿ ಸಮಾಧಾನ ಪಡಿಸಿದರು.

ಅರ್ಜೆಂಟೀನ ತಂಡ ಫೈನಲ್‌ನಲ್ಲಿ ಫ್ರಾನ್ಸ್ ಅನ್ನು ಪೆನಾಲ್ಟಿಯಲ್ಲಿ ಸೋಲಿಸಿತು. ಕಿಲಿಯನ್ ಎಂಬಾಪೆ ಗಳಿಸಿದ ಹ್ಯಾಟ್ರಿಕ್ ಗೋಲಿನಿಂದಾಗಿ ಹೆಚ್ಚುವರಿ ಸಮಯದಲ್ಲಿ ಪಂದ್ಯವು 3-3ರಿಂದ ಸಮಬಲಗೊಂಡಿತ್ತು. ನಂತರ ಅರ್ಜೆಂಟೀನವು  4-2 ರಿಂದ ಜಯಗಳಿಸಿತು. ಗೊಂಝಾಲೊ ಮೊಂಟಿಯೆಲ್ ನಿರ್ಣಾಯಕ ಪೆನಾಲ್ಟಿ ಗಳಿಸಿ ಅರ್ಜೆಂಟೀನಗೆ ಮೂರನೇ ವಿಶ್ವಕಪ್ ಗೆಲ್ಲಲು ಹಾಗೂ  60 ವರ್ಷಗಳಲ್ಲಿ ಟ್ರೋಫಿಯನ್ನು ಉಳಿಸಿಕೊಂಡ ಮೊದಲ ತಂಡವಾಗುವ ಫ್ರಾನ್ಸ್ ಪ್ರಯತ್ನಕ್ಕೆ  ತಡೆಯೊಡ್ಡಿದರು.

ಮೆಸ್ಸಿ ಹಾಗೂ ಎಂಬಾಪೆ ಇಬ್ಬರೂ  ತಮ್ಮ ಖ್ಯಾತಿಗೆ ತಕ್ಕಂತೆ ಆಡಿದರು.  ಮೆಸ್ಸಿ ಎರಡು ಬಾರಿ ಗೋಲು ಗಳಿಸಿದರೆ,  ಎಂಬಾಪೆ 1966 ರಲ್ಲಿ ಇಂಗ್ಲೆಂಡ್‌ನ ಜಿಯೋಫ್ ಹರ್ಸ್ಟ್‌ನ ನಂತರ ವಿಶ್ವಕಪ್‌ನ ಫೈನಲ್ ನಲ್ಲಿ  ಹ್ಯಾಟ್ರಿಕ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಫ್ರಾನ್ಸ್ 5 ವಿಶ್ವಕಪ್ ನಲ್ಲಿ 2ನೇ ಬಾರಿ ಫೈನಲ್ ನಲ್ಲಿ ಪೆನಾಲ್ಟಿ ಯಲ್ಲಿ ಸೋಲುಂಡಿತು. 2006 ರಲ್ಲಿ ಇಟಲಿಯ ವಿರುದ್ಧ ಪೆನಾಲ್ಟಿಯಲ್ಲಿ ಫೈನಲ್‌ನಲ್ಲಿ ಸೋತಿತ್ತು.  1986 ರ ನಂತರ ಅರ್ಜೆಂಟೀನಾ ಮೊದಲ ಬಾರಿಗೆ ಚಾಂಪಿಯನ್ ಆಗಿದೆ.

ಎಂಬಾಪೆ ಟೂರ್ನಿಯಲ್ಲಿ ಒಟ್ಟು 8 ಗೋಲು ಗಳಿಸಿ ಗರಿಷ್ಟ ಗೋಲ್ ಸ್ಕೋರರ್ ಎನಿಸಿಕೊಂಡಿದ್ದು, ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

Similar News