ಟ್ವಿಟರ್‌ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೇ?: ಎಲಾನ್‌ ಮಸ್ಕ್‌ ಹೊಸ ಪೋಲ್‌

Update: 2022-12-19 08:24 GMT

ವಾಷಿಂಗ್ಟನ್:‌ ಟ್ವಿಟರ್‌ ಒಡೆತನ ಪಡೆದ ಬೆನ್ನಲ್ಲೇ ಸಾಕಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದೇ ಅಲ್ಲದೆ ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನೂ ತಂದಿರುವ ಎಲಾನ್‌ ಮಸ್ಕ್‌ ಇದೀಗ ಟ್ವಿಟರ್‌ ಪೋಲ್‌ ಒಂದನ್ನು ಆರಂಭಿಸಿದ್ದಾರೆ.  "ನಾನು ಟ್ವಿಟರ್‌ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯಬೇಕೇ?" ಎಂದು ಟ್ವಿಟಗರಲ್ಲಿ ಕೇಳಿದ್ದಾರೆ.

ಈ ಪೋಲ್‌ ಫಲಿತಾಂಶಕ್ಕೆ ನಾನು ಬದ್ಧನಾಗಿರುತ್ತೇನೆ ಎಂದೂ ಮಸ್ಕ್‌ ಹೇಳಿಕೊಂಡಿದ್ದಾರೆ. "ಮುಂದೆ  ಪ್ರಮುಖ ನೀತಿ ಮಾರ್ಪಾಡುಗಳಿಗೆ ಮತದಾನವಿರಲಿದೆ. ಕ್ಷಮೆಯಿರಲಿ, ಮತ್ತೆ  ಹಾಗಾಗುವುದಿಲ್ಲ," ಎಂದೂ ಮಸ್ಕ್‌ ಬರೆದುಕೊಂಡಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, "ನೀವು ಬಯಸುವುದರ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ನೀವು ಅದನ್ನು ಪಡೆಯಬಹುದು," ಎಂದು ಅವರು ಬರೆದಿದ್ದಾರೆ.

ಫೇಸ್ಬುಕ್‌, ಇನ್‌ಸ್ಟಾಗ್ರಾಂ, ಮಸ್ಟೊಡೋನ್‌ ಒಳಗೊಂಡಂತೆ ಇತರ ನಿರ್ದಿಷ್ಟ ಸಾಮಾಜಿಕ ಜಾಲತಾಣಗಳಲ್ಲಿರುವ ಖಾತೆಗಳನ್ನು ಪ್ರೊಮೋಟ್‌ ಮಾಡಲು ಟ್ವಿಟರ್‌ನಲ್ಲಿ ಬಳಸಲಾಗುವ ಖಾತೆಗಳನ್ನು ನಿಷೇಧಿಸಲಾಗುವುದು ಎಂದು ಟ್ವಿಟರ್‌ ರವಿವಾರ ಘೋಷಿಸಿದ ಬೆನ್ನಲ್ಲೇ ಮಸ್ಕ್‌ ಅವರ ಟ್ವೀಟ್‌ಗಳು ಬಂದಿವೆ.

ಆದರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾದ ಪೋಸ್ಟ್‌ಗಳನ್ನು ಟ್ವಿಟರ್‌ನಲ್ಲೂ ಮಾಡಲು ಅನುಮತಿಸಲಾಗುವುದು ಎಂದೂ ಟ್ವಿಟರ್‌ ಹೇಳಿಕೊಂಡಿದೆ.

Similar News