ಖರ್ಗೆ ನೀಡಿದ ʻನಾಯಿʼ ಹೇಳಿಕೆಯಿಂದ ಸದನದಲ್ಲಿ ಕೋಲಾಹಲ; ಕ್ಷಮೆಯಾಚಿಸಲು ಬಿಜೆಪಿ ಪಟ್ಟು, ಕಾಂಗ್ರೆಸ್‌ ಅಧ್ಯಕ್ಷರ ನಕಾರ

Update: 2022-12-20 10:05 GMT

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದ ಭಾರತ್‌ ಜೋಡೋ ಯಾತ್ರಾ ಅನ್ನು ಭಾರತ್‌ ತೋಡೋ ಯಾತ್ರೆ ಎಂದು ವ್ಯಂಗ್ಯವಾಡಿದ್ದ ಬಿಜೆಪಿ ಮುಖಂಡರ ವಿರುದ್ಧ ಸೋಮವಾರ ರಾಜಸ್ಥಾನದ ಆಲ್ವಾರ್‌ನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಕಿಡಿಕಾರಿ ತಿರುಗೇಟು ನೀಡುವ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಳಸಿದ ʻನಾಯಿʼ ಎಂಬ ಪದಕ್ಕೆ ಆಕ್ಷೇಪಿಸಿ ಬಿಜೆಪಿ ಸಂಸದರು ಇಂದು ಎತ್ತಿದ ಆಕ್ಷೇಪದ ನಂತರ ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು.

"ಅತ್ಯಂತ ಹಳೆಯ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿತ್ತು, ಅದರ ನಾಯಕರಾದ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ತಮ್ಮ ಜೀವ ಬಲಿದಾನಗೈದಿದ್ದಾರೆ. ನಿಮ್ಮ ಮನೆಯ ನಾಯಿಯಾದರೂ ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆಯೇ? ಆದರೂ ಅವರು (ಬಿಜೆಪಿ) ತಾವು ದೇಶಭಕ್ತರು ಎಂದು ಹೇಳಿಕೊಳ್ಳುತ್ತಾ, ನಾವೇನು ಹೇಳಿದರೂ ನಮ್ಮನ್ನು ದೇಶದ್ರೋಹಿಗಳೆನ್ನುತ್ತಾರೆ," ಎಂದು ಖರ್ಗೆ ಹೇಳಿದ್ದರು.

ಚೀನಾ ಜೊತೆಗಿನ ಗಡಿ ಸಂಘರ್ಷದ ಬಗ್ಗೆ ಸದನದಲ್ಲಿ ಚರ್ಚಿಸಲು ಅನುಮತಿ ನೀಡದ ಸರ್ಕಾರವನ್ನು ಟೀಕಿಸಿದ್ದ ಖರ್ಗೆ, "ಸಿಂಹದ ರೀತಿ ಮಾತನಾಡುವ ಅವರು ನಂತರ ಇಲಿಯ ರೀತಿ ವರ್ತಿಸುತ್ತಾರೆ," ಎಂದು ಖರ್ಗೆ ಹೇಳಿದ್ದರು.

ಇದರಿಂದ ಆಕ್ರೋಶಗೊಂಡ ಬಿಜೆಪಿ ಸಂಸದರು ಇಂದು ಸದನದಲ್ಲಿ ಖರ್ಗೆ ಅವರ ಮಾತುಗಳಿಗೆ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಈ ನಿಂದನಾತ್ಮಕ ಭಾಷೆಗೆ ಅವರು ಕ್ಷಮೆಕೋರಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಹೇಳಿದರು.

ಸದನದಲ್ಲಿ ಕೋಲಾಹಲ ಉಂಟಾದಾಗ ಪ್ರತಿಕ್ರಿಯಿಸಿದ  ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಜಗದೀಪ್‌ ಧನ್ಕರ್‌, ಖರ್ಗೆ ಅವರು ಸದನದ ಹೊರಗೆ ಆಡಿದ ಮಾತುಗಳು ಎಂದು ಹೇಳಿದರು.

"ದೇಶದ 135 ಕೋಟಿ ಜನತೆ ನಮ್ಮನ್ನು ಗಮನಿಸುತ್ತಿದ್ದಾರೆ.ಯಾರೋ  ಏನನ್ನೋ ಹೊರಗೆ ಹೇಳಿರಬಹುದು, ನೀವೇನೂ ಮಕ್ಕಳಲ್ಲ," ಎಂದರು.

ಆಡಳಿತ ಪಕ್ಷದ ಸಂಸದರ ಆಗ್ರಹಗಳಿಗೆ ಬಗ್ಗದ ಖರ್ಗೆ "ನಾನು ಅದೇ ಮಾತುಗಳನ್ನು ಇಲ್ಲಿ ಹೇಳಿದರೆ ಈ ಜನರಿಗೆ(ಬಿಜೆಪಿ) ಕಷ್ಟವಾಗಬಹುದು, ಏಕೆಂದರೆ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಕ್ಷಮೆಯಾಚಿಸಿದವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಂದ ಕ್ಷಮೆಯಾಚಿಸಲು ಹೇಳುತ್ತಿದ್ಧಾರೆ, ಕಾಂಗ್ರೆಸ್‌ ಪಕ್ಷ ಭಾರತ್‌ ತೋಡೋ ಯಾತ್ರೆ ನಡೆಸುತ್ತಿದೆ ಎಂದು ಅವರು ಹೇಳುತ್ತಿದ್ದಾರೆ. ಅದಕ್ಕೆ ನಾನು ಹಾಗೆ ಹೇಳಿದೆ," ಎಂದರು.

Similar News