×
Ad

ವಿಶ್ವಕಪ್ ಚಾಂಪಿಯನ್ ಮೆಸ್ಸಿ, ತಂಡಕ್ಕೆ ತವರಿನಲ್ಲಿ ಅದ್ದೂರಿ ಸ್ವಾಗತ: ಸಾರ್ವತ್ರಿಕ ರಜೆ ಘೋಷಿಸಿದ ಅರ್ಜೆಂಟೀನ

Update: 2022-12-20 16:15 IST

ಬ್ಯೂನಸ್‌ ಐರಿಸ್‌: ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿನ ರೋಚಕ ಹಣಾಹಣಿಯಲ್ಲಿ ನಿಕಟಪೂರ್ವ ಚಾಂಪಿಯನ್ ಆಗಿದ್ದ ಫ್ರಾನ್ಸ್ ತಂಡವನ್ನು 4-2ರಿಂದ ಮಣಿಸಿ ಈ ಬಾರಿಯ ಚಾಂಪಿಯನ್ ಆಗಿರುವ ಲಿಯೊನೆಲ್ ಮೆಸ್ಸಿ ಹಾಗೂ ತಂಡಕ್ಕೆ ತವರಿನಲ್ಲಿ ಅದ್ದೂರಿ ಸ್ವಾಗತ ದೊರೆತಿದ್ದು, ಸಂಭ್ರಮಾಚರಣೆಯಲ್ಲಿ ದೇಶದ ಪ್ರತಿ ಪ್ರಜೆಯೂ ಪಾಲ್ಗೊಳ್ಳಲು ಅನುವಾಗುವಂತೆ ಅರ್ಜೆಂಟೀನ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ ಎಂದು ವರದಿಯಾಗಿದೆ.

ಈ ಕುರಿತು ಅಧಿಕೃತವಾಗಿ ಟ್ವೀಟ್ ಮಾಡಿರುವ ಅರ್ಜೆಂಟೀನ ಫುಟ್‌ಬಾಲ್ ಒಕ್ಕೂಟ, "ವಿಶ್ವಕಪ್ ಚಾಂಪಿಯನ್ ತಂಡವು ಮಂಗಳವಾರ ಮಧ್ಯಾಹ್ನ ಬೂನಸ್ ಐರಿಸ್‌ನ ಒಬೆಲಿಸ್ಕ್ ಕ್ರೀಡಾಂಗಣ ತಲುಪಲಿದ್ದು, ಅಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದೆ" ಎಂದು ತಿಳಿಸಿದೆ.

ಸಂಭ್ರಮಾಚಣೆಯ ನಿಮಿತ್ತ ಸರ್ಕಾರಿ ರಜೆ ಘೋಷಿಸಿರುವ ಅರ್ಜೆಂಟೀನಾ ಸರ್ಕಾರ, ಇಡೀ ದೇಶ ರಾಷ್ಟ್ರೀಯ ತಂಡದ ಆಟಗಾರರೊಂದಿಗೆ ರಾಜಧಾನಿ ಬೂನಸ್ ಏರಿಸ್‌ನ ಒಬೆಲಿಸ್ಕ್ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿ ಎಂಬ ಕಾರಣದಿಂದ ಮಂಗಳವಾರ ಬ್ಯಾಂಕ್ ಸೇರಿದಂತೆ ಎಲ್ಲ ಕಚೇರಿಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ಪ್ರಕಟಿಸಿದೆ.

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದ ಗೆಲುವು ದಾಖಲಿಸುವ ಮೂಲಕ ಅರ್ಜೆಂಟೀನಾ ತಂಡ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು‌. ಇದರಿಂದ ನಾಯಕ ಲಿಯೊನೆಲ್ ಮೆಸ್ಸಿಗೆ ಇದುವರೆಗೆ ಒಲಿಯದೆ ಉಳಿದಿದ್ದ ವಿಶ್ವಕಪ್ ಪ್ರಶಸ್ತಿ ಗರಿಯೂ ಸೇರಿ ಹೋಯಿತು.

ಖತರ್‌ನ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಪಂದ್ಯಾಂತ್ಯದ ವೇಳೆಗೆ ಅರ್ಜೆಂಟೀನಾ-ಫ್ರಾನ್ಸ್ ತಂಡಗಳೆರಡೂ 2-2ರ ಅಂತರದಲ್ಲಿ ಸಮಬಲ ಸಾಧಿಸಿದ್ದವು. ಹೆಚ್ಚುವರಿ ಸಮಯದ ಆಟದಲ್ಲೂ 3-3 ಅಂತರದಲ್ಲಿ ಸಮಬಲ ಸಾಧಿಸಿದವು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಚಾಂಪಿಯನ್ ಆಗಿ ಹೊಮ್ಮಿದ್ದು ಅರ್ಜೆಂಟೀನಾ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್. ಅವರ ಅದ್ಭುತ ಗೋಲು ರಕ್ಷಣೆಯಿಂದ ಅರ್ಜೆಂಟೀನಾ 4-2ರ ಅಂತರದಲ್ಲಿ ಫ್ರಾನ್ಸ್ ವಿರುದ್ಧ ಗೆಲುವು ಸಾಧಿಸಿ, ಕಳೆದ ಮೂರು ದಶಕದ ನಂತರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಇದಕ್ಕೂ ಮುನ್ನ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿ 2-0 ಅಂತರದ ಮುನ್ನಡೆಯೊಂದಿಗೆ, ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಅರ್ಜೆಂಟೀನಾ ತಂಡಕ್ಕೆ ಕೊನೆಯ ಹದಿನೈದು ನಿಮಿಷದಲ್ಲಿ ತೊಡರುಗಾಲು ಆಗಿದ್ದು ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪೆ. ಪಂದ್ಯದ 80 ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಒಡೆತದಲ್ಲಿ ಕೊಲೊ ಮುವಾನಿ ನೀಡಿದ ಪಾಸನ್ನು ಅರ್ಜೆಂಟೀನಾ ಗೋಲು ಪೆಟ್ಟಿಗೆಗೆ ತೂರಿಸುವಲ್ಲಿ ಕಿಲಿಯನ್ ಎಂಬಾಪೆ ಯಶಸ್ವಿಯಾದರು. ಮರು ನಿಮಿಷವೇ ಅವರು ಪಂದ್ಯವನ್ನು 2-2 ಅಂತರದಲ್ಲಿ ಸಮಬಲಗೊಳಿಸಿದರು.

ಹೆಚ್ಚುವರಿ ಸಮಯದಲ್ಲಿ ಹ್ಯೂಗೊ ಲಾರಿಸ್, ಫ್ರಾನ್ಸ್ ಗೋಲ್ ಕೀಪರ್‌ನನ್ನು ವಂಚಿಸಿ ಬಾಲನ್ನು ಗೋಲು ಪೆಟ್ಟಿಗೆ ಸೇರಿಸುವ ಮೂಲಕ ಅರ್ಜೆಂಟೀನಾ ತಂಡಕ್ಕೆ 3-2 ಅಂತರದ ಮುನ್ನಡೆ ದೊರಕಿಸಿಕೊಟ್ಟರು. ಆದರೆ, 118ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಎಂಬಾಪೆ ಬಾಲನ್ನು ಗೋಲು ಪೆಟ್ಟಿಗೆ ಸೇರಿಸುವ ಮೂಲಕ ಹ್ಯಾಟ್ರಿಕ್ ಗೌರವಕ್ಕೆ ಭಾಜನರಾದರು ಮತ್ತು ಪಂದ್ಯವನ್ನು 3-3 ಅಂತರದಲ್ಲಿ ಸಮಬಲಗೊಳಿಸಿದರು.

Similar News