ಸರ್ಕಾರಿ ಅಧಿಕಾರಿಗಳ ಅಧಿಕೃತ ಖಾತೆಗಳಿಗೆ ನೂತನ ಗುರುತು ನೀಡಿದ ಟ್ವಿಟರ್

Update: 2022-12-20 16:49 GMT

ಹೊಸದಿಲ್ಲಿ: ವಿವಿಧ ಸಂಸ್ಥೆಗಳಿಗೆ ವಿವಿಧ ನಮೂನೆ ಬಣ್ಣದ ಗುರುತುಗಳನ್ನು ನೀಡುವ ಟ್ವಿಟರ್‌ನ (Twitter) ನೂತನ ಪದ್ಧತಿಯು ಜಾರಿಯಾಗಿದ್ದು, ಇದೀಗ ಕಾರ್ಯರೂಪಕ್ಕೆ ಬಂದಿದೆ.

ಸರಕಾರಿ ಅಧಿಕಾರಿಗಳು ಹಾಗೂ ಅದಕ್ಕೆ ಸಮಾನಾಂತರ ಸಂಸ್ಥೆಗಳ ಹೆಸರಿನ ಪಕ್ಕದಲ್ಲಿ ಬೂದು ಬಣ್ಣದ ಗುರುತು (grey verification) ನೀಡಲಾಗಿದೆ. ಈ ಹೊಸ ಬೆಳವಣಿಗೆಯು ಈಗಾಗಲೇ ಕೆಲವು ಖಾತೆಗಳಲ್ಲಿ  ಕಾಣಿಸಿಕೊಂಡಿದೆ. ಆದರೆ, ಈ ಪ್ರಕ್ರಿಯೆಯನ್ನು ಇನ್ನೂ ಸಂಪೂರ್ಣವಾಗಿ ಜಾರಿಗೊಳಿಸುವುದು ಬಾಕಿಯಿದ್ದು, ರಾಜಕಾರಣಿಗಳ ಖಾತೆಯ ಹೆಸರಿನ ಮುಂದೆ ಈಗಲೂ ಹಳೆಯ ನೀಲಿ ಬಣ್ಣದ ಗುರುತೇ ಪ್ರದರ್ಶನಗೊಳ್ಳುತ್ತಿದೆ.

ಇದಕ್ಕೂ ಮುನ್ನ ಟ್ವಿಟರ್ ಸಂಸ್ಥೆಯ ನೂತನ ಮಾಲಕ ಎಲಾನ್ ಮಸ್ಕ್, ತಮ್ಮ ಜಾಲತಾಣದಲ್ಲಿ ಖಾತೆಗಳ ಪರಿಶೀಲನೆಗೆ ನೂತನ ಪದ್ಧತಿಯೊಂದನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಅವರು, "ವಿಳಂಬಕ್ಕೆ ಕ್ಷಮೆ ಇರಲಿ. ಮುಂದಿನ ಶುಕ್ರವಾರದಿಂದ ಪ್ರಾಯೋಗಿಕವಾಗಿ ಹೊಸ ಪರಿಶೀಲನಾ ಪದ್ಧತಿಯನ್ನು ಜಾರಿಗೊಳಿಸಲಾಗುವುದು" ಎಂದು ತಿಳಿಸಿದ್ದಾರೆ.

"ಕಂಪನಿಗಳಿಗೆ ಚಿನ್ನದ ಬಣ್ಣದ ಗುರುತು, ಸರ್ಕಾರಿ ಕಚೇರಿ ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಬೂದು ಬಣ್ಣದ ಗುರುತು ಹಾಗೂ ಖಾಸಗಿ ವ್ಯಕ್ತಿಗಳಿಗೆ (ತಾರೆಗಳು ಮತ್ತು ಅಲ್ಲದವರು) ನೀಲಿ ಬಣ್ಣದ ಗುರುತು ನೀಡಲಾಗುವುದು. ಪರಿಶೀಲನಾ ಪ್ರಕ್ರಿಯೆ ಸಂದರ್ಭದಲ್ಲಿ ಪ್ರತಿ ಖಾತೆಗಳನ್ನು ಸ್ವಯಂ ದೃಢೀಕರಣ ಪಡಿಸಲಾಗುವುದು" ಎಂದು ಹೇಳಿದ್ದರು.

ಕೆಲ ತಿಂಗಳ ಹಿಂದೆ ವಿವಿಧ ಸಂಸ್ಥೆಗಳಿಗೆ ಮತ್ತು ಖಾಸಗಿ ವ್ಯಕ್ತಿಗಳಿಗೆ ವಿವಿಧ ಬಣ್ಣದ ಗುರುತುಗಳನ್ನು ನೀಡುವ ಯೋಜನೆ ಕುರಿತು ಮಸ್ಕ್ ಟ್ವೀಟ್ ಮಾಡಿದ್ದರಾದರೂ, ಇತ್ತೀಚೆಗಷ್ಟೆ ಆ ಯೋಜನೆಯ ವಿವರವನ್ನು ಬಹಿರಂಗಗೊಳಿಸಿದ್ದರು.

Similar News