ನಡುಕಡಲಲ್ಲಿ ಸಿಕ್ಕಿಹಾಕಿಕೊಂಡಿರುವ 200ಕ್ಕೂ ಅಧಿಕ ರೊಹಿಂಗ್ಯ ನಿರಾಶ್ರಿತರು

ದೋಣಿಯಲ್ಲಿ ವಲಸೆ ಹೋಗಲು ಯತ್ನಿಸುತ್ತಿದ್ದ ನಿರಾಶ್ರಿತರ ತಂಡ ಅಪಾಯದಲ್ಲಿ ►ತುರ್ತು ನೆರವಿಗೆ ಧಾವಿಸುವಂತೆ ಆಗ್ನೇಯ ಏಶ್ಯ ರಾಷ್ಟ್ರ ನಾಯಕರ ಕರೆ

Update: 2022-12-20 17:00 GMT

ಜಕಾರ್ತ,ಡಿ.20: ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 200 ಮಂದಿ ರೋಹಿಂಗ್ಯ ನಿರಾಶ್ರಿತರನ್ನು ಕೊಂಡೊಯ್ಯುತ್ತಿದ್ದ ದೋಣಿಯೊಂದು ಹಲವಾರು ವಾರಗಳಿಂದ ನಡುಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದು,ಅದರ ರಕ್ಷಣೆಗೆ ಧಾವಿಸುವಂತೆ ಹಲವಾರು ಆಗ್ನೇಯ ಏಶ್ಯರಾಷ್ಟ್ರಗಳ ನಾಯಕರು ಸೋಮವಾರ ವಿಶ್ವಸಮುದಾಯಕ್ಕೆ ಕರೆ ನೀಡಿದ್ದಾರೆ.

ರೋಹಿಂಗ್ಯ ನಿರಾಶ್ರಿತರಿದ್ದ ದೋಣಿಯು ಥೈಲ್ಯಾಂಡ್,ಮಲೇಶ್ಯ, ಇಂಡೊನೇಶ್ಯ ಹಾಗೂ ಭಾರತದ ಅಂಡಮಾನ್ ಸಾಗರ ಪ್ರದೇಶ ಮತ್ತು ಮಲಕ್ಕಾ ಜಲಸಂಧಿಗೆ ಸಮೀಪ ಗೋಚರಿಸಿದ್ದಾಗಿ ಕೆಲವು ಮೂಲಗಳು ತಿಳಿಸಿವೆ.

 ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ದೋಣಿಯ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸುವಂತೆ ನಾವು ಅಸಿಯಾನ್ ಸದಸ್ಯ ರಾಷ್ಟ್ರಗಳಿಗೆ ತುರ್ತಾಗಿ ಕರೆ ನೀಡಿದ್ದೇವೆ ಎಂದು ಇಂಡೊನೇಶ್ಯದ ಸಂಸದೆ ಇವಾ ಸುಂದರಿ ತಿಳಿಸಿದ್ದಾರೆ. ದೋಣಿಯಲ್ಲಿ ಸಿಕ್ಕಿಹಾಕಿಕೊಂಡಿರುವ ನಿರಾಶ್ರಿತರು ಈಗಾಗಲೇ ತೀವ್ರ ಯಾತನೆಯನ್ನು ಅನುಭವಿಸಿದ್ದಾರೆ ಹಾಗೂ ಜೀವಹಾನಿಯಾಗಿರುವ ಸಾಧ್ಯತೆಯೂ ಇದೆಯೆಂದು ಮಲೇಶ್ಯದ ಮಾಜಿ ಸಂಸದ ಚಾರ್ಲ್ಸ್ ಸ್ಯಾಂಟಿಯಾಗೊ ಕಳವಳ ವ್ಯಕ್ತಪಡಿಸಿದ್ದಾರೆ.

ದೋಣಿ ಈಗ ಎಲ್ಲಿದೆಯೆಂಬ ಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಹಾಗೂ ಅದು ಎಲ್ಲಿಂದ, ಯಾವಾಗ ನಿರ್ಗಮಿಸಿದೆಯೆಂಬ ಬಗ್ಗೆಯೂ ಸ್ಪಷ್ಟವಾದ ಮಾಹಿತಿಯಿಲ್ಲವೆಂದು ಅವರು ಹೇಳಿದ್ದಾರೆ.

2017ರಲ್ಲಿ ಮ್ಯಾನ್ಮಾರ್‌ನಲ್ಲಿ ಸೇನಾಡೆಗಳು ರೋಹಿಂಗ್ಯಾಗಳ ವಿರುದ್ಧ ವ್ಯಾಪಕ ದಮನ ಕಾರ್ಯಾಚರಣೆ ನಡೆಸಿ, ಅತ್ಯಾಚಾರ, ಹತ್ಯಾಕಾಂಡ ಹಾಗೂ ಹಿಂಸಾಚಾರವನ್ನು ಎಸಗಿದ್ದವು. ಮ್ಯಾನ್ಮಾರ್ ಸೇನಾಪಡೆಯ ದಬ್ಬಾಳಿಕೆಯಿಂದ ಪಾರಾಗಲು ಲಕ್ಷಾಂತರ ಮಂದಿ ರೋಹಿಂಗ್ಯಗಳು ತಾಯ್ನಾಡನ್ನು ತೊರೆದು ನೆರೆಯ ರಾಷ್ಟ್ರವಾದ ಬಾಂಗ್ಲಾದ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು. ಆದರೆ ನಿರಾಶ್ರಿತರಿಂದ ತುಂಬಿ ತುಳುಕುತ್ತಿದದ ಶಿಬಿರಗಳ ಶೋಚನೀಯ ಸ್ಥಿತಿಯಿಂದಾಗಿ ಹಲವಾರು ರೋಹಿಂಗ್ಯ ಮುಸ್ಲಿಮರು ಮತ್ತೆ ಬೇರೆಡೆಗೆ ವಲಸೆ ಹೋಗುವಂತಾಗಿದೆ .

 ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ದೋಣಿಯಲ್ಲಿ ತನ್ನ ಪುತ್ರಿ ಮುನ್ವರಾ ಬೇಗಂ ಕೂಡಾ ಇದ್ದು, ಆಕೆ ತನ್ನೊಂದಿಗೆ ವಾಕಿಟಾಕಿಯಲ್ಲಿ ಮಾತನಾಡಿರುವುದಾಗಿ ಬಾಂಗ್ಲಾದೇಶದಕಾಕ್ಸ್ ಬಝಾರ್‌ನ ರೋಹಿಂಗ್ಯ ನಿರಾಶ್ರಿತ ಶಿಬಿರದಲ್ಲಿನ ನಿವಾಸಿ ನೂರ್ ಹಬಿ ಎಂಬಾಕೆ ಹೇಳಿದ್ದಾರೆ.

 ‘ನಾವು ಅಪಾಯದಲ್ಲಿದ್ದೇವೆ, ನಮ್ಮ ದಯವಿಟ್ಟು ರಕ್ಷಿಸಿ’ ಎಂದು 23 ವರ್ಷ ವಯಸ್ಸಿನ ಮುನ್ವಾರಾ ಹೇಳುತ್ತಿರುವುದು ಮೊಬೈಲ್ ಫೋನ್ ಆಡಿಯೋ ಕ್ಲಿಪ್ಪಿಂಗ್‌ನಲ್ಲಿ ಕೇಳಿಸಿದೆ. ‘ನಮ್ಮ ಬಳಿ ಯಾವುದೇ ಆಹಾರ ಅಥವಾ ನೀರು ಇಲ್ಲ. ಮುಳುಗುತ್ತಿರುವ ಈ ದೋಣಿಯಿಂದ ನಮ್ಮನ್ನು ರಕ್ಷಿಸುವವರು ಯಾರೂ ಇಲ್ಲ’ ಎಂದು ಆಕೆ ದಿಗ್ಭ್ರಮೆಯಿಂದ ಹೇಳುತ್ತಿರುವುದು ದೂರವಾಣಿಯಲ್ಲಿ ಕೇಳಿಸಿದೆ.

ಮ್ಯಾನ್ಮಾರ್‌ನ ಸೇನಾಡಳಿತದ ದೌರ್ಜನ್ಯಕ್ಕೊಳಗಾಗಿರುವ ಸಾವಿರಾರು ರೋಹಿಂಗ್ಯಾ ಮುಸ್ಲಿಮರು ಪ್ರತಿ ವರ್ಷ ತಮ್ಮ ಜೀವವನ್ನೇ ಪಣಕ್ಕೊಡ್ಡಿ, ಕಳಪೆ ಸ್ಥಿತಿಯಲ್ಲಿರುವ ದೋಣಿಗಳಲ್ಲಿ ಸಮುದ್ರದಲ್ಲಿ ದೀರ್ಘದೂರ ಪ್ರಯಾಣಿಸಿ, ಮಲೇಶ್ಯ ಅಥವಾ ಇಂಡೋನೇಶ್ಯದೇಶಗಳನ್ನು ತಲುಪಲು ಯತ್ನಿಸುತ್ತಾರೆ.

Similar News