ಇರಾನ್ ನಟಿ ಅಲಿದೂಸ್ತಿ ಬಂಧನ: ಕಾನ್, ಟೊರಾಂಟೊ ಚಿತ್ರೋತ್ಸವ ಸಂಘಟಕರಿಂದ ತೀವ್ರ ಖಂಡನೆ

Update: 2022-12-20 17:34 GMT

ಟೆಹರಾನ್,ಡಿ.20 : ಇರಾನ್ ಚಿತ್ರನಟಿ ತಾರಾನೆಹ್ ಅಲಿದೂಸ್ತಿ (Taraneh Alidusti)ಅವರ ಬಂಧನವನ್ನು ಕಾನ್ ಚಲನಚಿತ್ರೋತ್ಸವ, ಬರ್ಲಿನ್ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟಕರು ತೀವ್ರವಾಗಿ ಖಂಡಿಸಿದ್ದಾರೆ ಹಾಗೂ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಇರಾನ್ ಜನತೆಯ ಜೊತೆ ಏಕತೆಯನ್ನು ಪ್ರದರ್ಶಿಸಿದ್ದಾರೆ.

38 ವರ್ಷ ವಯಸ್ಸಿನ ಅಲಿ ದೂಸ್ತಿ ಅವರನ್ನು ಶನಿವಾರ ಬಂಧಿಸಲಾಗಿತ್ತು. ಆಡಳಿತ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಅಪರಾಧ ಎಸಗಿದ ಆರೋಪಕ್ಕೊಳಗಾಗಿ ಗಲ್ಲುಶಿಕ್ಷೆಗೆ ಗುರಿಯಾದ ಮೊಹ್ಸೆನ್ ಶೆಕಾರಿಯನ್ನು ಬೆಂಬಲಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಒಂದು ವಾರದ ಬಳಿಕ ಅಲಿದೂಸ್ತಿ ಅವರನ್ನು ಪೊಲೀಸರು ಬಂಧಿಸಿದ್ದರು.

ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತು ಸುಳ್ಳುವದಂತಿಗಳನ್ನು ಹರಡುತ್ತಿರುವ ಆರೋಪದಲ್ಲಿ ಆಕೆಯನ್ನು ಬಂಧಿಸಿದ್ದರು.

ಆಸ್ಗರ್ ಫಾರ್‌ಹದಿ ನಿರ್ದೇಶನದ ಆಸ್ಕರ್ ವಿಜೇತ ಚಿತ್ರ ‘ ದಿ ಸೇಲ್ಸ್ ಮ್ಯಾನ್’ (The Sales Man)ಚಿತ್ರದ ನಟಿಯಾದ ಅಲಿದೂಸ್ತಿ, ಇರಾನ್ ಆಡಳಿತದ ವಿರುದ್ಧ ಜಗತ್ತಿಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದರು ಎಂದು ಬರ್ಲಿನ್ ಚಿತ್ರೋತ್ಸವದ ಸಂಘಟಕರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಟೊರಾಂಟೊ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ವರಿಷ್ಠ ಕ್ಯಾಮರೂನ್ ಬೈಲಿ ಈ ಬಗ್ಗೆ ಟ್ವೀಟ್ ಮಾಡಿದ್ದು, ‘‘ ತಾರಾನೆಹ್ ಅಲಿದೂಸ್ತ್ ಇರಾನ್‌ನ ಅತ್ಯಂತ ಪ್ರತಿಭಾವಂತ ಹಾಗೂ ಪ್ರಸಿದ್ಧ ತಾರೆಯರಲ್ಲೊಬ್ಬರು. ಆಕೆಯ ನೂತನ ಚಿತ್ರ ಸಬ್‌ಟ್ರಾಕ್ಷನ್ ಅನ್ನು ಟೊರಾಂಟೊ ಚಿತ್ರೋತ್ಸವದಲ್ಲಿ ಪ್ರದರ್ಶಿಸಲು ಹೆಮ್ಮೆಪಡುತ್ತೇವೆ. ಇರಾನ್ ಚಿತ್ರರಂಗವನ್ನು ಬಲಪಡಿಸಲು ಆಕೆ ಶೀಘ್ರದಲ್ಲೇ ಬಂಧಮುಕ್ತಿಗೊಳ್ಳುವರೆಂದು ನಾವು ಆಶಿಸುತ್ತೇವೆ’’ ಎಂದು ಹೇಳಿದ್ದಾರೆ.

ಮಹ್‌ಸಾ ಅಮಿನಾ ಎಂಬ ಯುವತಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಘಟನೆಯ ಬಳಿಕ ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ಭುಗಿಲೆದ್ದಿದೆ.

Similar News