ಎಲ್‍ಎಸಿ ಬಳಿ ಚೀನಾ ಕ್ಷಿಪ್ರ ಮೂಲಸೌಕರ್ಯ ಅಭಿವೃದ್ಧಿ, ರಸ್ತೆ ನಿರ್ಮಾಣ

Update: 2022-12-21 02:52 GMT

ಹೊಸದಿಲ್ಲಿ: ಭಾರತ- ಚೀನಾ ಗಡಿಯ ಆಯಕಟ್ಟಿಯ ಸ್ಥಳವಾದ ಅರುಣಾಚಲ ಪ್ರದೇಶದ ತವಾಂಗ್ ವಲಯದ ಯಂಗ್‍ತ್ಸೆ (Yangtse) ಬಳಿ ಚೀನಾ ಹೊಸ ರಸ್ತೆ ನಿರ್ಮಾಣ ಸೇರಿದಂತೆ ಕ್ಷಿಪ್ರವಗಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಪ್ರಮುಖವಾದ ಪರ್ವತ ಶ್ರೇಣಿಯ ರೇಖೆ ಅಥವಾ ಎತ್ತರದ ಪ್ರದೇಶ ಭಾರತದ ನಿಯಂತ್ರಣದಲ್ಲಿದ್ದರೂ, ಹೊಸ ಮೂಲಸೌಕರ್ಯ ಚೀನಾಗೆ ಹೆಚ್ಚುವರಿ ಪಡೆಗಳನ್ನು ಕ್ಷಿಪ್ರವಾಗಿ ನಿಯೋಜಿಸಲು ಅನುವು ಮಾಡಿಕೊಡಲಿದೆ.

"ಒಂದು ವರ್ಷ ಹಿಂದೆ ಇದ್ದುದಕ್ಕಿಂತ ತೀರಾ ಸುಲಭವಾಗಿ ಇದೀಗ ಪಿಎಲ್‍ಎ ಯಂಗ್‍ತ್ಸೆ ಪ್ರಸ್ಥಭೂಮಿ ಪ್ರದೇಶವನ್ನು ತಲುಪಬಹುದಾಗಿದೆ" ಎಂದು ಆಸ್ಟ್ರೇಲಿಯಾದ ಸ್ಟ್ರಾಟಜಿಕ್ ಪಾಲಿಸಿ ಇನ್‍ಸ್ಟಿಟ್ಯೂಟ್ ಮಂಗಳವಾರ ಎಚ್ಚರಿಸಿದೆ. ಚೀನಾ ಹಲವು ಕಳಪೆ ರಸ್ತೆಗಳನ್ನು ಮೇಲ್ದರ್ಜೆಗೇರಿಸಿದ್ದು ಮಾತ್ರವಲ್ಲದೇ, ಎಲ್‍ಎಸಿ ಪರ್ವತಶ್ರೇಣಿಗೆ ಕೇವಲ 150 ಮೀಟರ್ ಅಂತರದಲ್ಲಿ ಹೊಸದಾಗಿ ನಿರ್ಮಿಸಿರುವ ತಂಗ್ವು ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಿದೆ.

ಯಂಗ್‍ತ್ಸೆಯಲ್ಲಿ ಇತ್ತೀಚೆಗೆ ಚೀನಾ ಹಾಗೂ ಭಾರತ ಸೈನಿಕರ ನಡುವೆ ಸಂಘರ್ಷ ನಡೆದು ಹಲವು ಮಂದಿ ಸೈನಿಕರು ಗಾಯಗೊಂಡ ಹಿನ್ನೆಲೆಯಲ್ಲಿ ವಾಸ್ತವ ನಿಯಂತ್ರಣ ರೇಖೆಯ ಉಪಗ್ರಹ ಚಿತ್ರಗಳ ವಿಶ್ಲೇಷಣೆ ಆಧಾರದಲ್ಲಿ, ಈ ಅಧ್ಯಯನ ನಡೆಸಲಾಗಿದೆ.

"ಯಂಗ್‍ತ್ಸೆ ಪ್ರಸ್ಥಭೂಮಿಯ ಮೇಲ್ಭಾಗದ ಪ್ರಮುಖ ಆಯಕಟ್ಟಿನ ಸ್ಥಾನವನ್ನು ಭಾರತ ನಿಯಂತ್ರಿಸುತ್ತಿದ್ದರೆ, ಹೊಸ ಮಿಲಿಟರಿ ಮತ್ತು ಸಾರಿಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮೂಲಕ ಚೀನಾ ತನ್ನ ಪಾಲಿಗೆ ಇರುವ ಅನಾನುಕೂಲ ಪರಿಸ್ಥಿತಿ ನಿವಾರಿಸಿಕೊಂಡಿದೆ. ಇದು ಈ ಪ್ರದೇಶಕ್ಕೆ ಕ್ಷಿಪ್ರವಾಗಿ ಪಡೆಗಳನ್ನು ನಿಯೋಜಿಸಲು ಸಹಕಾರಿಯಾಗಲಿದೆ" ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ಅಧಿಕೃತ ಖಾತೆಗಳಿಗೆ ನೂತನ ಗುರುತು ನೀಡಿದ ಟ್ವಿಟರ್

Similar News